ಕೇಪ್ ಕ್ಯಾನವೆರಲ್: ಚಂದ್ರನ ಅಂಗಳಕ್ಕೆ ತೆರಳಿದ್ದಗನಯಾತ್ರಿಗಳು ಸರಿಯಾಗಿ 50 ವರ್ಷಗಳ ಬಳಿಕ ಬಾಹ್ಯಾಕಾಶ ಉಡಾವಣೆಗೆವೇದಿಕೆ ಕಲ್ಪಿಸಿದ್ದ ಐತಿಹಾಸಿಕ ಜಾಗದಲ್ಲಿ ಸೇರಿ ಅದ್ಭುತ ಕ್ಷಣಗಳಿಗೆ ಮತ್ತೊಮ್ಮೆ ಸಾಕ್ಷಿಯಾಗಲಿದ್ದಾರೆ.
ಅಮೆರಿಕದ ಮೂವರು ಗಗನಯಾತ್ರಿಗಳು50 ವರ್ಷಗಳ ಹಿಂದೆ ಫ್ಲಾರಿಡಾದಿಂದ ಚಂದ್ರನ ಅಂಗಳಕ್ಕೆ ತೆರಳಿದ್ದರು. ’ಅಪೊಲೊ 11’ ಬಾಹ್ಯಾಕಾಶ ನೌಕೆ ಮೊದಲ ಬಾರಿಗೆ ಮಾನವರನ್ನು ಹೊತ್ತು ಚಂದ್ರನ ಮೇಲಿಳಿದಿತ್ತು.ಈ ಮೂವರಲ್ಲಿ ಬಝ್ ಅಲ್ಡ್ರಿನ್ ಮತ್ತು ಮೈಕಲ್ ಕಾಲಿನ್ಸ್ ಬದುಕುಳಿದಿದ್ದಾರೆ. ಇವರ ಕಮಾಂಡರ್ ಆಗಿದ್ದ ಮತ್ತು ಚಂದ್ರನ ಅಂಗಳಲ್ಲಿ ಮೊದಲು ಹೆಜ್ಜೆ ಇಟ್ಟ ನೀಲ್ ಎ. ಆರ್ಮ್‌ಸ್ಟ್ರಾಂಗ್ 2012ರಲ್ಲಿ ನಿಧನರಾದರು.
‘ಅಪೊಲೊ 11’ರ ನೆನಪಿಗಾಗಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿಯೇ 89 ವರ್ಷದ ಅಲ್ಡ್ರಿನ್ ಮತ್ತು 88 ವರ್ಷದ ಕಾಲಿನ್ಸ್ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಭೇಟಿಯಾಗಲಿದ್ದಾರೆ. ಇದೇ ಕೇಂದ್ರದಿಂದ 50 ವರ್ಷಗಳ ಹಿಂದೆ ‘ಅಪೊಲೊ 11’ ಅನ್ನು ‘ಸ್ಯಾಟರ್ನ್ ವಿ’ ರಾಕೆಟ್ ಮೂಲಕ ಉಡಾವಣೆ ಮಾಡಲಾಗಿತ್ತು.
1969ರ ಜುಲೈ 16ರಂದು ಈ ಗಗನಯಾತ್ರಿಗಳು ’ಅಪೊಲೊ 11’ ಬಾಹ್ಯಾಕಾಶ ನೌಕೆ ಮೂಲಕ ತೆರಳಿದ್ದರು. ನಾಲ್ಕು ದಿನಗಳ ಬಳಿಕ ಆರ್ಮ್‌ಸ್ಟ್ರಾಂಗ್ ಹೊರಗೆ ಬಂದು ಚಂದ್ರನ ಅಂಗಳದಲ್ಲಿನ ರೋಮಾಂಚನ ಕ್ಷಣಗಳನ್ನು ಅನುಭವಿಸಿದರು. ಅಲ್ಡ್ರಿನ್ ಚಂದ್ರನ ಅಂಗಳದಲ್ಲಿ ಹೆಜ್ಜೆ ಇಟ್ಟ ಎರಡನೇ ವ್ಯಕ್ತಿಯಾಗಿದ್ದರು.ಕಾಲಿನ್ಸ್ ಚಂದ್ರನ ಕಕ್ಷೆಯಲ್ಲಿದ್ದ ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲೇ ಉಳಿದುಕೊಂಡಿದ್ದರು.ಅಪೊಲೊ ಚಂದ್ರ ಯಾನ ಯೋಜನೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾನವನ ಅತ್ಯುನ್ನತ ಸಾಧನೆಯಾಗಿತ್ತು.
ಇದುವರೆಗೆ ಚಂದ್ರನಲ್ಲಿಗೆ ತೆರಳಿದ 12 ಮಂದಿಯಲ್ಲಿ ನಾಲ್ವರು ಮಾತ್ರ ಬದುಕುಳಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.