ADVERTISEMENT

ಕೊರೊನಾ ಸೋಂಕು, ಸಾವು ಹೆಚ್ಚುತ್ತಿದ್ದಂತೆ ಮಾಸ್ಕೊದಲ್ಲಿ ಕೆಲಸಕಾರ್ಯ ಸ್ಥಗಿತ

ಏಜೆನ್ಸೀಸ್
Published 28 ಅಕ್ಟೋಬರ್ 2021, 13:26 IST
Last Updated 28 ಅಕ್ಟೋಬರ್ 2021, 13:26 IST
ವ್ಲಾದಿಮಿರ್‌ ಪುಟಿನ್‌
ವ್ಲಾದಿಮಿರ್‌ ಪುಟಿನ್‌   

ಮಾಸ್ಕೊ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ರಷ್ಯಾದ ರಾಜಧಾನಿ ಮಾಸ್ಕೊದಲ್ಲಿ ಗುರುವಾರ ಕೆಲಸ ಮಾಡದ ಅವಧಿ ಪ್ರಾರಂಭಿಸಲಾಗಿದೆ. ದೈನಂದಿನ ಹೊಸ ಪ್ರಕರಣಗಳು ಮತ್ತು ಕೋವಿಡ್‌–19ನಿಂದ ಸಂಭವಿಸುತ್ತಿರುವ ಸಾವುಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಸೋಂಕು ಹರಡುವಿಕೆ ತಡೆಗಟ್ಟಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಅಕ್ಟೋಬರ್ 30ರಿಂದ ನವೆಂಬರ್ 7ರವರೆಗೆ ಕೆಲಸ ಮಾಡದ ಅವಧಿ ಜಾರಿಗೊಳಿಸಿ, ಆದೇಶಿಸಿದ್ದಾರೆ. ಹೆಚ್ಚಿನ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ವಾಣಿಜ್ಯ ಉದ್ದಿಮೆಗಳು ಕಾರ್ಯಾಚರಣೆ ಸ್ಥಗಿತಗೊಳಿಸಲಿವೆ.

ಕೊರೊನಾ ವೈರಸ್ ಸರ್ಕಾರಿ ಕಾರ್ಯಪಡೆಯು 24 ಗಂಟೆಗಳಲ್ಲಿ 1,159 ಸಾವುಗಳನ್ನು ವರದಿ ಮಾಡಿದೆ. ಇದು ಪಿಡುಗು ಪ್ರಾರಂಭವಾದ ನಂತರದ ಅತಿದೊಡ್ಡ ದೈನಂದಿನ ಸಂಖ್ಯೆ ಎನಿಸಿದೆ. ದೇಶದಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ ಅಧಿಕೃತವಾಗಿ 2,35,057ಕ್ಕೆ ತಲುಪಿದೆ. ಇದು ಯುರೋಪಿನಲ್ಲಿ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ.

ADVERTISEMENT

ಹೊಸ ದೈನಂದಿನ ಪ್ರಕರಣಗಳ ಸಂಖ್ಯೆಯು 40,096ಕ್ಕೆ ಏರಿಕೆಯಾಗಿದ್ದು, ಹಿಂದಿನ ದಾಖಲೆಯನ್ನು ಈ ವಾರದ ಆರಂಭದಲ್ಲಿ ದಾಟಿದೆ.

ಸೋಂಕು ತಡೆಗಟ್ಟಲು ಹೆಚ್ಚು ಪೀಡಿತ ಪ್ರದೇಶಗಳಲ್ಲಿ ಈ ವಾರದ ಆರಂಭದಲ್ಲಿ ಕೆಲಸ ರಹಿತ ಅವಧಿಯನ್ನು ಪರಿಚಯಿಸಲಾಗಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಅತಿ ಶೀಘ್ರದಲ್ಲಿ ಜಾರಿಗೆ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.