ನಿರ್ಣಯ ಮಂಡಿಸಿದ ಸುಖ್ ಧಲಿವಾಲ್
ಚಿತ್ರಕೃಪೆ: X/@sukhdhaliwal
ಒಟ್ಟಾವ: ಭಾರತದಲ್ಲಿ ನಡೆದ 1984ರ ಸಿಖ್ ವಿರೋಧಿ ಗಲಭೆಯನ್ನು ನರಮೇಧ ಎಂದು ಘೋಷಿಸುವ ನಿರ್ಣಯವನ್ನು ಕೆನಡಾ ಸಂಸತ್ತು ವಜಾಗೊಳಿಸಿದೆ.
ಇಂತಹ ನಿರ್ಣಯದ ಹಿಂದೆ ಖಾಲಿಸ್ತಾನಿ ಬೆಂಬಲಿತ ರಾಜಕೀಯ ಲಾಬಿ ನಡೆಯುತ್ತಿದೆ ಎಂದು ಕರ್ನಾಟಕ ಮೂಲದ ಚಂದ್ರ ಆರ್ಯ ಸೇರಿದಂತೆ ಹಲವು ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಿರ್ಣಯ ವಜಾಗೊಂಡ ಬಳಿಕ ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸುಖ್ ಧಲಿವಾಲ್ ಅವರು, 'ಭಾರತದಲ್ಲಿ 1984ರಲ್ಲಿ ಹಾಗೂ ನಂತರ ಸಿಖ್ ಸಮುದಾಯದವರ ವಿರುದ್ಧ ನಡೆದ ಅಪರಾಧ ಕೃತ್ಯಗಳನ್ನು ನರಮೇಧವೆಂದು ಕರೆಯುವ ನಿಟ್ಟಿನಲ್ಲಿ ಇಂದು ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದೆ. ಕನ್ಸರ್ವೇಟಿವ್ ಪಕ್ಷದ ಹಲವು ಸಂಸದರು ಮತ್ತು ಲಿಬರಲ್ ಪಕ್ಷದ ಒಬ್ಬರು ಇದನ್ನು ವಿರೋಧಿಸಿದ್ದು ದುಃಖಕರ' ಎಂದು ಬರೆದುಕೊಂಡಿದ್ದಾರೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಚಂದ್ರ ಆರ್ಯ, '1984ರ ಸಿಖ್ ವಿರೋಧಿ ಗಲಭೆಗಳನ್ನು ನರಮೇಧ ಎಂದು ಘೋಷಿಸಲು ಸರ್ರೇ–ನ್ಯೂಟನ್ ಸಂಸದರು ಸಂಸತ್ತಿನಲ್ಲಿ ಪ್ರಯತ್ನಿಸಿದರು. ತಮ್ಮ ನಿರ್ಣಯವನ್ನು ಅಂಗೀಕರಿಸಲು ಹೌಸ್ ಆಫ್ ಕಾಮನ್ಸ್ (ಕೆಳಮನೆ) ಸದಸ್ಯರ ಸರ್ವಾನುಮತದ ಒಪ್ಪಿಗೆ ಕೋರಿದರು. ಸಾಧ್ಯವಿಲ್ಲ ಎಂದು ಸದನದಲ್ಲಿ ಹೇಳಿದ ಏಕೈಕ ಸದಸ್ಯ ನಾನು. ನನ್ನ ಆಕ್ಷೇಪಣೆಯು, ನಿರ್ಣಯವನ್ನು ತಡೆಯಲು ಸಾಕಾಯಿತು. ಇದರ ಬೆನ್ನಲ್ಲೇ, ಸದನದಲ್ಲಿ ನನಗೆ ಬೆದರಿಕೆಯೊಡ್ಡಲಾಯಿತು' ಎಂದಿದ್ದಾರೆ.
ಮುಂದುವರಿದು, 'ಹಿಂದೂ-ಕೆನಡಿಯನ್ನರ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಹಾಗೂ ಸಾರ್ವಜನಿಕವಾಗಿ ಧ್ವನಿ ಎತ್ತದಂತೆ ನನ್ನನ್ನು ತಡೆಯುವ ಹಲವು ಪ್ರಯತ್ನಗಳು ಸಂಸತ್ತಿನ ಒಳಗೆ ಮತ್ತು ಹೊರಗೆ ನಡೆದಿವೆ. ಇಂತಹ ವಿಭಜಕ ಕಾರ್ಯಸೂಚಿಯನ್ನು ತಡೆಯಲು ಯಶಸ್ವಿಯಾಗಿದ್ದಕ್ಕೆ ನನಗೆ ಹೆಮ್ಮೆ ಇದೆ' ಎಂದು ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.