ADVERTISEMENT

ಮೌಂಟ್‌ ಎವರೆಸ್ಟ್ ಏರಿ ಭಾರತೀಯನ ಸಂಭ್ರಮ; ಇಳಿಯುವ ಹಾದಿಯಲ್ಲಿ ಮರಣ

ಏಜೆನ್ಸೀಸ್
Published 16 ಮೇ 2025, 9:23 IST
Last Updated 16 ಮೇ 2025, 9:23 IST
ಮೌಂಟ್ ಎವರೆಸ್ಟ್ ಏರಲು ಸರತಿ ಸಾಲಿನಲ್ಲಿ ನಿಂತಿರುವ ಸಾಹಸಿಗರು
ಮೌಂಟ್ ಎವರೆಸ್ಟ್ ಏರಲು ಸರತಿ ಸಾಲಿನಲ್ಲಿ ನಿಂತಿರುವ ಸಾಹಸಿಗರು   

ಕಠ್ಮಂಡು: ಜಗತ್ತಿನ ಅತಿ ಎತ್ತರದ ಮೌಂಟ್ ಎವರೆಸ್ಟ್ ಏರುವ ಹಾದಿಯಲ್ಲಿ ಭಾರತೀಯ ಸಾಹಸಿ ಮೃತಪಟ್ಟಿದ್ದಾರೆ ಎಂದು ಆಯೋಜಕರು ಶುಕ್ರವಾರ ಹೇಳಿದ್ದಾರೆ. 

ಮೌಂಟ್ ಎವರೆಸ್ಟ್‌ನಲ್ಲಿ ಈ ವರ್ಷ ಸಂಭವಿಸಿದ ಎರಡನೇ ಸಾವು ಇದಾಗಿದೆ. ಪಶ್ಚಿಮ ಬಂಗಾಳದ ಸಬರ್ತಾ ಘೋಷ್‌ (45) ಅವರು ಜಗತ್ತಿನ ಅತಿ ಎತ್ತರದ ಶಿಖರದ (8,849 ಮೀಟರ್‌) ತುದಿಯನ್ನು ಗುರುವಾರ ತಲುಪಿ ಸಂಭ್ರಮಿಸಿದ್ದರು. ಆದರೆ ಅಲ್ಲಿಂದ ಕೇವಲ 50 ಮೀಟರ್‌ ಇಳಿದಾಗ ಅವರು ಮೃತಪಟ್ಟಿದ್ದಾರೆ. 

‘ಅವರು ಬಹಳಷ್ಟು ಬಳಲಿದ್ದರು ಎಂದೆನಿಸುತ್ತದೆ. ಜತೆಗೆ ಎತ್ತರ ಪ್ರದೇಶದಲ್ಲಿ ಹಲವರನ್ನು ಕಾಡುವ ದೈಹಿಕ ಬಳಲಿಕೆಯೂ ಅವರಿಗಾಗಿರಬಹುದು. ಅವರ ಮಾರ್ಗದರ್ಶಕರಿಗಾಗಿ ಕಾಯುತ್ತಿದ್ದೇವೆ. ಅವರು ಬಂದ ನಂತರವಷ್ಟೇ ಸ್ಪಷ್ಟ ಮಾಹಿತಿ ತಿಳಿಯಲಿದೆ’ ಎಂದು ಸ್ನೋವಿ ಹೊರೈಝಾನ್‌ ಟ್ರೆಕ್ಸ್‌ನ ಬೋಧ ರಾಜ್ ಭಂಡಾರಿ ತಿಳಿಸಿದ್ದಾರೆ.

ADVERTISEMENT

ಕಡಿಮೆ ಆಮ್ಲಜನಕ ಮತ್ತು ಎತ್ತರದ ಪ್ರದೇಶದಲ್ಲಿ ಕಾಡುವ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ಉಲ್ಭಣಿಸುವ ಕಾರಣದಿಂದ ಮೌಂಟ್‌ ಎವರೆಸ್ಟ್‌ನಲ್ಲಿ 8 ಸಾವಿರ ಮೀಟರ್‌ ಎತ್ತರದ ಪ್ರದೇಶವನ್ನು ‘ಸಾವಿನ ವಲಯ’ (ಡೆತ್‌ ಝೋನ್‌) ಎಂದೇ ಕರೆಯಲಾಗುತ್ತದೆ. 

ಘೋಷ್ ಅವರಿದ್ದ ತಂಡದಲ್ಲೇ ಇದ್ದ ಫಿಲಿಪಿನೊದ ಸಾಹಸಿ ಶಿಖರದ ತುದಿ ತಲುಪುವ ಮೊದಲೇ ಬುಧವಾರ ಮೃತಪಟ್ಟಿದ್ದಾರೆ.

ಈ ಋತುಮಾನದಲ್ಲಿ ಮೌಂಟ್‌ ಎವರೆಸ್ಟ್‌ ಏರಲು ಅವಕಾಶ ನೀಡಿದ ನಂತರ ಈವರೆಗೂ 50ಕ್ಕೂ ಹೆಚ್ಚು ಸಾಹಸಿಗಳು ಶಿಖರದ ತುತ್ತತುದಿ ತಲುಪಿದ್ದಾರೆ. ಈ ಬಾರಿ ಇಲ್ಲಿನ ಹವೆಯೂ ಉತ್ತಮವಾಗಿದೆ ಎಂದು ಆಯೋಜಕರು ಹೇಳಿದ್ದಾರೆ.

ಪ್ರತಿ ಬೇಸಿಗೆಯಲ್ಲಿ ಹಿಮಾಲಯ ಚಾರಣ ಆರಂಭವಾಗುತ್ತದೆ. ನೇಪಾಳ ಕಡೆಯಿಂದ ಜಗತ್ತಿನ ಅತಿ ಎತ್ತರದ 10 ಶಿಖರಗಳ ಚಾರಣಕ್ಕೆ ನೂರಾರು ಚಾರಣಿಗರು ಸಾಹಸಯಾತ್ರೆ ಕೈಗೊಳ್ಳುತ್ತಾರೆ. ಕಳೆದ ವರ್ಷ 800ಕ್ಕೂ ಹೆಚ್ಚು ಸಾಹಸಿಗಳು ಎವರೆಸ್ಟ್‌ನ ತುದಿಯನ್ನು ತಲುಪಿ ಮರಳಿದರು. ಇವರಲ್ಲಿ 74 ಸಾಹಸಿಗಳು ಟಿಬೆಟ್ ಮಾರ್ಗವಾಗಿ ಎವರೆಸ್ಟ್ ಏರಿದ್ದರು. ಎಂಟು ಜನ ಮೃತಪಟ್ಟಿದ್ದಾರೆ. ಇವರಲ್ಲಿ ನೇಪಾಳ, ಮಂಗೋಲಿಯಾ, ಕೆನ್ಯಾ, ಬ್ರಿಟನ್ ಮತ್ತು ಭಾರತೀಯರು ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.