
ಕಠ್ಮಂಡು: ನೂರಾರು ಕೋಟಿ ಜನರ ಬೃಹತ್ ಜಲಮೂಲವಾಗಿರುವ ಹಿಂದೂ ಕುಶ್ ಹಿಮಾಲಯ ಪ್ರದೇಶವು ಹವಾಮಾನ ವೈಪರೀತ್ಯದ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳಿಗೆ ತೀವ್ರ ಆರ್ಥಿಕ ಕೊರತೆ ಎದುರಿಸುತ್ತಿದೆ. 2050ರವರೆಗೂ ಈ ಉದ್ದೇಶಗಳಿಗೆ 12 ಲಕ್ಷ ಕೋಟಿ ಡಾಲರ್ ಅಗತ್ಯವಿದೆ ಎಂದು ಇತ್ತೀಚಿನ ಪ್ರಾದೇಶಿಕ ವಿಶ್ಲೇಷಣೆಯೊಂದು ಅಂದಾಜಿಸಿದೆ.
ಈ ಪ್ರಾಂತ್ಯದ ಹವಾಮಾನ ಹೊಂದಾಣಿಕೆ ಮತ್ತು ವೈಪರೀತ್ಯ ತಗ್ಗಿಸುವಿಕೆ ಅಗತ್ಯಗಳನ್ನು ಪೂರೈಸಲು ಸದ್ಯ ಇರುವ ಹಣಕಾಸು ಬದ್ಧತೆಗಳು ಸಾಲದು ಎಂದು ಸಮಗ್ರ ಶಿಖರ ಅಭಿವೃದ್ಧಿ ಕುರಿತಾದ ಅಂತರರಾಷ್ಟ್ರೀಯ ಕೇಂದ್ರ (ಐಸಿಐಎಂಒಡಿ) ತನ್ನ ವರದಿಯಲ್ಲಿ ಹೇಳಿದೆ.
‘ಹಿಂದೂ ಕುಷ್ ಹಿಮಾಲಯ ರಾಷ್ಟ್ರಗಳ ಅಗತ್ಯ, ಹರಿವು ಮತ್ತು ಅಂತರಗಳು: ಹವಾಮಾನ ಆರ್ಥಿಕ ಸಂಶ್ಲೇಷಣಾ ವರದಿ’ಯನ್ನು ಭೂತಾನ್‌ನ ಪಾರೋದಲ್ಲಿ ನಡೆದ ಸಮ್ಮೇಳನದಲ್ಲಿ ಅನಾವರಣಗೊಳಿಸಲಾಗಿದೆ.
ಸುಮಾರು 3500 ಕಿಲೋಮೀಟರ್ ವ್ಯಾಪ್ತಿ ಇರುವ ಹಿಂದೂ ಕುಶ್ ಹಿಮಾಲಯ ಪ್ರದೇಶದಲ್ಲಿರುವ ಅಫ್ಗಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಚೀನಾ, ಭಾರತ, ಮ್ಯಾನ್ಮಾರ್, ನೇಪಾಳ ಮತ್ತು ಪಾಕಿಸ್ತಾನ ದೇಶಗಳ ಅಂತರ ಸರ್ಕಾರಗಳ ಸಂಸ್ಥೆಯಾಗಿ ಐಸಿಐಎಂಒಡಿ ಕಾರ್ಯನಿರ್ವಹಿಸುತ್ತಿದೆ. ವರ್ಷಕ್ಕೆ 768.68 ಶತಕೋಟಿ ಡಾಲರ್ ಖರ್ಚು ಮಾಡಬೇಕಾಗುತ್ತದೆ. ಚೀನಾ ಮತ್ತು ಭಾರತವೇ ಶೇ 92.4ರಷ್ಟು ಮೊತ್ತವನ್ನು ಭರಿಸಬೇಕಾಗುತ್ತದೆ.
‘ಗುರಿ ಮುಟ್ಟಲು 12 ಲಕ್ಷ ಕೋಟಿ ಡಾಲರ್ ಮೊತ್ತ ಹೊಂದಿಸುವುದೇ ಎವರೆಸ್ಟ್ ಶಿಖರ ಏರಿದಂತೆ’ ಎಂದು ವರದಿಯ ಮುಖ್ಯ ಲೇಖಕ ಹಾಗೂ ಹೂಡಿಕೆ ತಜ್ಞ ಗುಲಾಮ್ ಅಲಿ ಹೇಳಿದ್ದಾರೆ.
ಬಾಂಗ್ಲಾದೇಶ, ಭೂತಾನ್, ಭಾರತ, ಮ್ಯಾನ್ಮಾರ್, ನೇಪಾಳ ಮತ್ತು ಪಾಕಿಸ್ತಾನ ದೇಶಗಳು ವಿಕೋಪಗಳು ಸೇರಿದಂತೆ ಹವಾಮಾನ ವೈಪರೀತ್ಯದ ಹೆಚ್ಚು ಸಮಸ್ಯೆ ಎದುರಿಸುತ್ತಿವೆ. ಈ ದೇಶಗಳು ಬಳಸುತ್ತಿರುವ ತಲಾ ವೆಚ್ಚದಲ್ಲೂ ಭಾರಿ ವ್ಯತ್ಯಾಸ ಇದೆ. ಯೋಜನೆ ರೂಪಿಸುವವರ ಮೇಲೆ ಅಭಿವೃದ್ಧಿ ಮತ್ತು ಜನಸಂಖ್ಯೆ ಹೆಚ್ಚಳ ಸಮಸ್ಯೆಗಳ ಒತ್ತಡ ಇದೆ. ಹೀಗಾಗಿ ವಾತಾವರಣ ಕುರಿತ ಆರ್ಥಿಕ ವೆಚ್ಚದ ಅಸಮಾನತೆ ಕಾಣುತ್ತಿದೆ.
ಹವಾಮಾನಕ್ಕಾಗಿ ಸಾಲ ವಿನಿಮಯ, ಪರ್ವತಗಳು ಮತ್ತು ಸೂಕ್ಷ್ಮ ಪರಿಸರ ರಕ್ಷಣೆಗೆ ಸಾರ್ವಜನಿಕ ವೆಚ್ಚ ಹೆಚ್ಚಳದತ್ತ ಗಮನ ಹರಿಸಿದರೆ ಹವಾಮಾನ ವೈಪರೀತ್ಯ ನಿಯಂತ್ರಣದ ಉದ್ದೇಶಕ್ಕಾಗಿ ಬಳಸುವ ನಿಧಿಯನ್ನು ಸರಿದೂಗಿಸಿಕೊಳ್ಳಬಹುದು ಎಂದು ವರದಿ ಸಲಹೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.