ADVERTISEMENT

ಟ್ರಂಪ್‌ ಅಧಿಕಾರ ಸ್ವೀಕಾರ: ಚರ್ಚೆಗೆ ಗ್ರಾಸವಾದ ಮಸ್ಕ್ ಹಾವಭಾವ

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 15:26 IST
Last Updated 21 ಜನವರಿ 2025, 15:26 IST
ವಾಷಿಂಗ್ಟನ್‌ನಲ್ಲಿ ನಡೆದ ಸಮಾರಂಭದಲ್ಲಿ ಎಲಾನ್ ಮಸ್ಕ್ ಅವರ ಆಂಗಿಕ ವರ್ತನೆ. ಎಎಫ್‌ಪಿ ಚಿತ್ರ
ವಾಷಿಂಗ್ಟನ್‌ನಲ್ಲಿ ನಡೆದ ಸಮಾರಂಭದಲ್ಲಿ ಎಲಾನ್ ಮಸ್ಕ್ ಅವರ ಆಂಗಿಕ ವರ್ತನೆ. ಎಎಫ್‌ಪಿ ಚಿತ್ರ   

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್‌ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ, ಉದ್ಯಮಿ ಎಲಾನ್‌ ಮಸ್ಕ್ ತೋರಿದ ಹಾವಭಾವ ಈಗ ವಿವಾದಕ್ಕೆ ಎಡೆಯಾಗಿದೆ. ‘ನಾಜಿ’ ಎಂದು ಕೆಲವರು, ಪ್ರತಿಗಾಮಿ ನಡೆ ಎಂದು ಇನ್ನೂ ಕೆಲವರು ಮಸ್ಕ್ ಅವರ ವರ್ತನೆಯನ್ನು ಟೀಕಿಸಿದ್ದಾರೆ.

‘ಎಕ್ಸ್‌’, ‘ಸ್ಪೇಸ್‌ ಎಕ್ಸ್‌’, ‘ಟೆಸ್ಲಾ’ ಸಿಇಒ ಆದ ಮಸ್ಕ್, ಅಧಿಕಾರ ಸ್ವೀಕಾರ ನಿಮಿತ್ತ ಇಲ್ಲಿನ ಕ್ಯಾಪಿಟಲ್ ಒನ್‌ ಅರೆನಾದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಂಭ್ರಮಿಸಿ ಈ ವರ್ತನೆ ತೋರಿದ್ದರು.

ಟ್ರಂಪ್ ಅವರು ಮರಳಿ ಶ್ವೇತಭವನ ಪ್ರವೇಶಿಸುವ ಸಂದರ್ಭಕ್ಕಾಗಿ ಜನಸ್ತೋಮಕ್ಕೆ ಕೃತಜ್ಞತೆ ಸಲ್ಲಿಸುವಾಗ,  ಎದೆಯ ಬಲಭಾಗಕ್ಕೆ ಬಲಗೈನಿಂದ ತಟ್ಟಿ, ‌ಕೈ ಎತ್ತಿ ಹಸ್ತ ತೋರಿದ್ದರು. ಮತ್ತೆ ತಿರುಗಿ, ವೇದಿಕೆಯ ಹಿಂಭಾಗ ಕುಳಿತಿದ್ದ ಸಭಿಕರತ್ತ ತಿರುಗಿ ಇದನ್ನು ಪುನರಾವರ್ತಿಸಿದ್ದರು.

ADVERTISEMENT

ನಾಜಿ ಸಿದ್ಧಾಂತ ಕುರಿತು ಅಧ್ಯಯನ ನಡೆಸಿರುವ ಇತಿಹಾಸಕಾರ ಕ್ಲೇರ್ ಔಬಿನ್ ಅವರು, ಇದನ್ನು ‘ನಾಜಿ ಶೈಲಿಯ ನಮಸ್ಕಾರ’ ಎಂದು ವ್ಯಾಖ್ಯಾನಿಸಿದರು.

‘ನನ್ನ ವೃತ್ತಿ ಅನುಭವದ ಪ್ರಕಾರ, ನಿಮ್ಮ ಎಲ್ಲರ ಅಭಿಪ್ರಾಯ ಸರಿ. ನೀವು ನಿಮ್ಮ ಕಣ್ಣುಗಳನ್ನು ಮಾತ್ರ ನಂಬಬೇಕು’ ಎಂದು ಔಬಿನ್‌ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ‘ಎಕ್ಸ್‌’ನಲ್ಲಿ ಮಸ್ಕ್‌ ಪ್ರತಿಕ್ರಿಯಿಸಿದ್ದಾರೆ. ‘ನನ್ನ ವಿರೋಧಿಗಳಿಗೆ ಇನ್ನಷ್ಟು ಕೆಟ್ಟ ತಂತ್ರಗಳ ಅಗತ್ಯವಿದೆ. ‘ಎಲ್ಲರೂ ಹಿಟ್ಲರ್‌ಗಳು’ ಎಂದಿದ್ದಾರೆ.

ಸಂಸದ ಜಿಮ್ಮಿ ಗೊಮೆಜ್ ಅವರು, ಇದು ತುಂಬ ದಿನ ನಡೆಯದು ಎಂದು ಹೇಳಿದ್ದರೆ, ಸಂಭ್ರಮಾಚರಣೆ ರ‍್ಯಾಲಿ ಭಾಗವಹಿಸಿದ್ದವರು ‘ಅದೊಂದು ಹಾಸ್ಯದ ನಡೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.