ADVERTISEMENT

ಮ್ಯಾನ್ಮಾರ್‌: ಪ್ಯಾರಾಗ್ಲೈಡ್‌ನಲ್ಲಿ ಬಂದು ಬಾಂಬ್ ಹಾಕಿದ ಯೋಧ! 40 ಜನ ಸಾವು

ಮ್ಯಾನ್ಮಾರ್‌ ಸೇನೆ ಅಟ್ಟಹಾಸ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2025, 6:53 IST
Last Updated 9 ಅಕ್ಟೋಬರ್ 2025, 6:53 IST
<div class="paragraphs"><p>ಮ್ಯಾನ್ಮಾರ್‌: ಪ್ಯಾರಾಗ್ಲೈಡ್‌ನಲ್ಲಿ ಬಂದು ಬಾಂಬ್ ಹಾಕಿದ ಯೋಧ! 40 ಜನ ಸಾವು</p></div>

ಮ್ಯಾನ್ಮಾರ್‌: ಪ್ಯಾರಾಗ್ಲೈಡ್‌ನಲ್ಲಿ ಬಂದು ಬಾಂಬ್ ಹಾಕಿದ ಯೋಧ! 40 ಜನ ಸಾವು

   

ಬೆಂಗಳೂರು: ಮ್ಯಾನ್ಮಾರ್‌ ಸೇನೆಯ ಯೋಧನೊಬ್ಬ ಪ್ಯಾರಾಗ್ಲೈಡರ್ ಮೂಲಕ ಬಂದು ಸ್ಥಳೀಯ ಬುದ್ಧಿಸ್ಟ್ ಉತ್ಸವದ ಮೇಲೆ ಬಾಂಬ್ ಹಾಕಿದ್ದರಿಂದ 40 ಜನ ಮೃತಪಟ್ಟು 40ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಮ್ಯಾನ್ಮಾರ್‌ನಲ್ಲಿ ನಡೆದಿದೆ.

ಮ್ಯಾನ್ಮಾರ್‌ನ (ಬರ್ಮಾ) ವಾಯವ್ಯ ಪ್ರಾಂತ್ಯವಾದ ಸಾಗಿಂಗ್ ಪ್ರದೇಶದ ಚಾಂಗ್ ಯು ಎಂಬ ಪಟ್ಟಣದಲ್ಲಿ ನಿನ್ನೆ ಸಂಜೆ 7 ಗಂಟೆ ಸುಮಾರು ಈ ದುರ್ಘಟನೆ ನಡೆದಿದೆ.

ADVERTISEMENT

ಮ್ಯಾನ್ಮಾರ್‌ನಲ್ಲಿ 2021ರಿಂದ ಮಿಟಿಟರಿ ಜುಂಟಾ ಹೆಸರಿನಲ್ಲಿ ಸೇನಾಡಳಿತವಿದೆ.

ಚಾಂಗ್ ಯು ಪಟ್ಟಣದಲ್ಲಿ ಸ್ಥಳೀಯರು ಹುಣ್ಣಿಮೆ ಪ‍್ರಯುಕ್ತ ಬುದ್ಧಿಸ್ಟ್ ಉತ್ಸವ ನಡೆಸುತ್ತಿದ್ದರು. ಈ ಉತ್ಸವದಲ್ಲಿ ಸೇನಾಡಳಿತ ವಿರೋಧಿ ಬಂಡುಕೋರರು ಸಭೆ ಸೇರಿ ಭಾಗಿಯಾಗಿದ್ದಾರೆ ಎಂಬ ಗುಮಾನಿ ಮೇಲೆ ಸೇನೆಯ ಉನ್ನತ ಅಧಿಕಾರಿಗಳ ನಿರ್ದೇಶನದ ಮೇರೆಗೆ ಯೋಧನೊಬ್ಬ ಪ್ಯಾರಾಗ್ಲೈಡರ್ ಮೂಲಕ ಜನರ ಮೇಲೆ ಬಾಂಬ್ ಹಾಕಿ ಪರಾರಿಯಾಗಿದ್ದಾನೆ.

ಸ್ಫೋಟದ ಭೀಕರತೆಗೆ ಸಣ್ಣ ಮಕ್ಕಳು, ಯುವಕರು, ಮಹಿಳೆಯರು ಸೇರಿ 40 ಜನ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ವರದಿಗಳು ತಿಳಿಸಿವೆ.

ಪ್ಯಾರಾಗ್ಲೈಡರ್ ಮೂಲಕ ಬಂದಿದ್ದ ಇನ್ನೊಬ್ಬ ಯೋಧ, ಅದೇ ಊರಿನ ಕಟ್ಟಡದ ಮೇಲೆ ಬಾಂಬ್ ಎಸೆದಿದ್ದ. ಆದರೆ, ಅಲ್ಲಿನ ಸಾವು–ನೋವಿನ ವಿವರಗಳು ಲಭ್ಯವಾಗಿಲ್ಲ ಎಂದು ತಿಳಿಸಿವೆ.

ಮ್ಯಾನ್ಮಾರ್‌ ಸೇನೆಯ ಮಿಲಿಟರಿ ಜುಂಟಾ ಆಡಳಿತದ ವಿರುದ್ಧ ಆಂತರಿಕ ಬಂಡುಕೋರ ಧಂಗೆಗಳು ಅಲ್ಲಿ ಸಾಮಾನ್ಯವಾಗಿದ್ದು, ಅವುಗಳನ್ನು ಹತ್ತಿಕ್ಕಲು ಸೇನೆ ಪ್ರತಿದಾಳಿಗಳನ್ನು ನಡೆಸುವುದಲ್ಲದೇ ಅನುಮಾನಾಸ್ಪದರ ಮೇಲೆ ಹೀಗೆ ಭೀಕರ ದಾಳಿಗಳನ್ನು ಆಗಾಗ ನಡೆಸುತ್ತಿದೆ.

ಬಂಡುಕೋರರನ್ನು ಹತ್ತಿಕ್ಕಲು ಮ್ಯಾನ್ಮಾರ್‌ ಸೇನೆ ವೈಮಾನಿಕ ದಾಳಿಗಳನ್ನು ನಡೆಸುತ್ತಿತ್ತು. ಇದೀಗ ಪ್ಯಾರಾಗ್ಲೈಡರ್ ಯೋಧರ ಮೂಲಕ ದಾಳಿಗಳನ್ನು ಮುಂದುವರೆಸಿದೆ.

2021ರಲ್ಲಿ ಸೇನಾಡಳಿತ ಸ್ಥಾಪನೆಯಾದಾಗಿನಿಂದ ಈವರೆಗೆ ದೇಶದಲ್ಲಿ ನಡೆಸಲಾದ 1700 ವೈಮಾನಿಕ ದಾಳಿಯಲ್ಲಿ 2000 ಮಂದಿ ಸಾವಿಗೀಡಾಗಿದ್ದಾರೆ, 1000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಜೊತೆಗೆ 137 ಧಾರ್ಮಿಕ ಕಟ್ಟಡಗಳು, 76 ಶಾಲೆಗಳು ಮತ್ತು 28 ಆಸ್ಪತ್ರೆಗಳು ಹಾನಿಗೊಳಗಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.