(ಚಿತ್ರ ಕೃಪೆ: X/@narendramodi)
ಪೋರ್ಟ್ ಲೂಯಿಸ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾರಿಷಸ್ ರಾಷ್ಟ್ರಪತಿ ಧರಮ್ ಗೋಕೂಲ್ ಅವರು ದೇಶದ ಅತ್ಯುನ್ನತ ಗೌರವವಾದ ‘ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆ್ಯಂಡ್ ಕೀ ಆಫ್ ದಿ ಇಂಡಿಯನ್ ಓಷನ್’ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಿದರು.
ಮಾರಿಷಸ್‌ನ ‘ಸ್ವಾತಂತ್ರ್ಯ ದಿನ’ದಂದು (ಮಾ.12) ಪ್ರಧಾನಿ ಮೋದಿ ಅವರಿಗೆ ಈ ಗೌರವ ನೀಡಲಾಯಿತು. ಪ್ರಧಾನಿ ಮೋದಿ ಅವರು ಮಾರಿಷಸ್‌ನ ಈ ಗೌರವವನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ. ಮಾರಿಷಸ್ ನಾಗರಿಕರನ್ನು ಹೊರತುಪಡಿಸಿ, ವಿದೇಶಿಗರಿಗೆ ಈ ಗೌರವ ನೀಡಿದ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅವರು ಐದನೆಯವರಾಗಿದ್ದಾರೆ.
ಮೋದಿ ಅವರಿಗೆ ನೀಡಲಾದ 21ನೇ ಅಂತರರಾಷ್ಟ್ರೀಯ ಪ್ರಶಸ್ತಿ ಇದು. ಭಾರತ ಮತ್ತು ಮಾರಿಷಸ್‌ನ ದ್ವಿಪಕ್ಷೀಯ ಒಪ್ಪಂದಗಳನ್ನು ಬಲಪಡಿಸಿದ ಕಾರಣ, ಪ್ರಧಾನಿ ಮೋದಿ ಅವರಿಗೆ ಈ ಗೌರವ ನೀಡಲಾಗಿದೆ.
ಎಂಟು ಒಪ್ಪಂದಗಳಿಗೆ ಸಹಿ
ವ್ಯಾಪಾರ, ಕಡಲ್ಗಾವಲು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ 8 ಒಪ್ಪಂದಕ್ಕೆ ಭಾರತ ಮತ್ತು ಮಾರಿಷಸ್ ಸಹಿ ಹಾಕಿವೆ. ಪ್ರಧಾನಿ ಮೋದಿ ಅವರು ಜಗತ್ತಿನ ದಕ್ಷಿಣ ದೇಶಗಳ ಅಭಿವೃದ್ಧಿಗೆ ಮಹತ್ವಾಕಾಂಕ್ಷಿಯಾದ ದೂರದೃಷ್ಟಿಯ ‘ಮಹಾಸಾಗರ’ ಯೋಜನೆಯನ್ನು ಘೋಷಿಸಿದ್ದಾರೆ.
ಮಹಾಸಾಗರ ಎಂದರೆ ಎಂಎಎಚ್‌ಎಎಸ್‌ಎಜಿ ಎಆರ್– ಮ್ಯೂಚುವಲ್ ಆ್ಯಂಡ್ ಹೋಲಿಸ್ಟಿಕ್ ಅಡ್ವಾನ್ಸ್‌ಮೆಂಟ್ ಫಾರ್ ಸೆಕ್ಯುರಿಟಿ ಆ್ಯಂಡ್ ಗ್ರೋತ್ ಅಕ್ರಾಸ್ ರೀಜನ್ (ಪ್ರದೇಶದ ಭದ್ರತೆ ಮತ್ತು ಪ್ರಗತಿಗಾಗಿ ಪರಸ್ಪರ ಮತ್ತು ಸಮಗ್ರವಾದ ಸಹಕಾರ) ಎಂದರ್ಥ. 2015ರಲ್ಲಿ ಪ್ರಧಾನಿ ಮೋದಿ ಅವರು ಮಾರಿಷಸ್‌ಗೆ ಭೇಟಿ ನೀಡಿದ್ದಾಗ ‘ಸಾಗರ’ (ಎಸ್‌ಎಜಿಎಆರ್: ಸೆಕ್ಯುರಿಟಿ ಆ್ಯಂಡ್ ಗ್ರೋತ್ ಫಾರ್ ಆಲ್ ಇನ್ ದಿ ರೀಜನ್ ಪಾಲಿಸಿ (ಈ ಪ್ರದೇಶದ ಎಲ್ಲ ದೇಶಗಳ ಭದ್ರತೆ ಮತ್ತು ಪ್ರಗತಿಯ ನೀತಿ) ಎನ್ನುವ ದೂರದೃಷ್ಟಿಯ ಯೋಜನೆಯನ್ನು ಘೋಷಿಸಿದ್ದರು.
ಮಾರಿಷಸ್‌ನ ಅತ್ಯುನ್ನತ ಗೌರವ ನೀಡಿದ್ದಕ್ಕಾಗಿ ಹೃದಯ ತುಂಬಿ ಧನ್ಯವಾದಗಳು. ಇದು ನನಗೆ ಸಂದ ಗೌರವ ಮಾತ್ರವಲ್ಲ. ಇದು 140 ಕೋಟಿ ಭಾರತೀಯರಿಗೆ ಸಂದ ಗೌರವ. ಉಭಯ ರಾಷ್ಟ್ರಗಳ ಐತಿಹಾಸಿಕ ಬಾಂಧವ್ಯಕ್ಕೆ ಸಂದ ಗೌರವವಾಗಿದೆ.–ನರೇಂದ್ರ ಮೋದಿ, ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.