ADVERTISEMENT

ಪೂರ್ವ ಯುರೋಪ್‌ಗೆ ಹಡಗು, ಯುದ್ಧ ವಿಮಾನ ಕಳುಹಿಸಿದ ನ್ಯಾಟೊ

ಏಜೆನ್ಸೀಸ್
Published 24 ಜನವರಿ 2022, 14:25 IST
Last Updated 24 ಜನವರಿ 2022, 14:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬ್ರಸೆಲ್ಸ್‌ (ಎಎಫ್‌ಪಿ): ಉತ್ತರ ಅಟ್ಲಾಂಟಿಕ್‌ ಒಕ್ಕೂಟದ (ನ್ಯಾಟೊ) ಮಿತ್ರ ರಾಷ್ಟ್ರಗಳು ಸೇನೆಯನ್ನು ಸಜ್ಜಾಗಿರಿಸಿದ್ದು ಪೂರ್ವ ಯುರೋಪಿನತ್ತ ಹಡಗುಗಳು ಮತ್ತು ಯುದ್ಧ ವಿಮಾನಗಳನ್ನು ಕಳುಹಿಸಿವೆ ಎಂದು ನ್ಯಾಟೊ ಸೋಮವಾರ ಹೇಳಿದೆ.

ಉಕ್ರೇನ್ ಸುತ್ತಲೂ ರಷ್ಯಾದ ಮಿಲಿಟರಿ ಪಡೆಗಳ ಸನ್ನದ್ಧತೆಯಿಂದ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಮನಗಂಡು ರಕ್ಷಣೆಯನ್ನು ಹೆಚ್ಚಿಸಲುಈ ಕ್ರಮ ಕೈಗೊಳ್ಳಲಾಗಿದೆ.

‘ಎಲ್ಲಾ ಮಿತ್ರ ರಾಷ್ಟ್ರಗಳನ್ನು ಬಲಪಡಿಸುವ ಮೂಲಕ ಅವುಗಳನ್ನು ರಕ್ಷಿಸಲು ನ್ಯಾಟೊ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಭದ್ರತಾ ಕೊರತೆಯ ಯಾವುದೇ ಸಮಸ್ಯೆಗೆ ನಾವು ಯಾವಾಗಲೂ ಪ್ರತಿಕ್ರಿಯಿಸುತ್ತೇವೆ’ ಎಂದು ನ್ಯಾಟೊ ಪ್ರಧಾನ ಕಾರ್ಯದರ್ಶಿ ಜರನ್ಸ್‌ ಸ್ಟೋಲ್ಟೆನ್‌ಬರ್ಗ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ರೊಮೇನಿಯಾಗೆ ಸೈನ್ಯವನ್ನು ಕಳುಹಿಸಲು ಫ್ರಾನ್ಸ್‌ ಸಜ್ಜಾಗಿದೆ. ಅಮೆರಿಕ ಸಹ ಪೂರ್ವ ಯುರೋಪ್‌ನಲ್ಲಿ ತನ್ನ ಸೇನೆಯ ಉಪಸ್ಥಿತಿಯನ್ನು ಹೆಚ್ಚಿಸುತ್ತಿದೆ ಎಂದೂ ಹೇಳಿಕೆ ತಿಳಿಸಿದೆ.

ಮಾಸ್ಕೊ ಗಡಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಒಟ್ಟುಗೂಡಿಸುವ ಮೂಲಕ ಉಕ್ರೇನ್ ಮೇಲೆ ಆಕ್ರಮಣ ಮಾಡುವ ಬೆದರಿಕೆ ಹಾಕುತ್ತಿದೆ ಎಂದು ಪಶ್ಚಿಮ ರಾಷ್ಟ್ರಗಳು ಆರೋಪಿಸಿವೆ. ಆದರೆ ರಷ್ಯಾ ಇದನ್ನು ನಿರಾಕರಿಸಿದೆ.

ನ್ಯಾಟೊದ ಪೂರ್ವ ದೇಶಗಳ ಸದಸ್ಯರು ಗಡಿಯಲ್ಲಿ ಭದ್ರತೆಗೆ ಮನವಿ ಮಾಡಿದ್ದಾರೆ.

‘ಯುರೋಪಿನಲ್ಲಿ ರಷ್ಯನ್‌ ಮತ್ತು ಬೆಲರೂಸಿಯನ್‌ ಮಿಲಿಟರಿಯನ್ನು ನ್ಯಾಟೊದ ಸೂಕ್ತ ಕ್ರಮಗಳ ಮೂಲಕ ಎದುರಿಸುವ ಹಂತವನ್ನು ನಾವು ತಲುಪುತ್ತಿದ್ದೇವೆ’ ಎಂದು ಲಾಟ್ವಿಯಾದ ವಿದೇಶಾಂಗ ಸಚಿವ ಎಡ್ಗರ್‌ ರಿಂಕೆವಿಕ್ಸ್‌ ಟ್ವೀಟ್‌ ಮಾಡಿದ್ದಾರೆ.

ರಷ್ಯಾ 2014 ರಲ್ಲಿ ಕ್ರೈಮಿಯಾವನ್ನು ಕೈವ್‌ನಿಂದ ವಶಪಡಿಸಿಕೊಂಡ ನಂತರ ಬಾಲ್ಟಿಕ್ ರಾಜ್ಯಗಳಲ್ಲಿ ನ್ಯಾಟೊ ಮಿತ್ರ ರಾಷ್ಟ್ರಗಳು ಸೇನೆಯನ್ನು ಬಲಪಡಿಸಿದವು. ಪ್ರಸ್ತುತ ರೊಮೇನಿಯಾ ಮತ್ತು ಬಲ್ಗೇರಿಯಾಕ್ಕೆ ಹೆಚ್ಚಿನ ಸೈನ್ಯವನ್ನು ನಿಯೋಜಿಸುವ ಕುರಿತು ಯೋಚಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.