ADVERTISEMENT

ನೇಪಾಳ: ಅತಿ ಎತ್ತರದ ಚಾರಣಕ್ಕೆ ತೆರಳಿದ್ದಾಗ ಆಮ್ಲಜನಕದ ಕೊರತೆಯಿಂದ ನಾಲ್ವರು ಸಾವು

ಪಿಟಿಐ
Published 27 ಅಕ್ಟೋಬರ್ 2025, 14:08 IST
Last Updated 27 ಅಕ್ಟೋಬರ್ 2025, 14:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಠ್ಮಂಡು: ಅತಿ ಎತ್ತರದ ಚಾರಣಕ್ಕೆ ತೆರಳಿದ್ದಾಗ ಆಮ್ಲಜನಕದ ಕೊರತೆಯಿಂದ ಅಸ್ವಸ್ಥಗೊಂಡು (ಆಲ್ಟಿಟ್ಯೂಡ್‌ ಸಿಕ್‌ನೆಸ್‌) ನೇಪಾಳದ ಇಬ್ಬರು ಕೂಲಿ ಕಾರ್ಮಿಕರು ಮತ್ತು ಇಬ್ಬರು ಚಾರಣಿಗರು ಮೃತಪಟ್ಟಿದ್ದಾರೆ. 

‘ಆಲ್ಟಿಟ್ಯೂಡ್‌ ಸಿಕ್‌ನೆಸ್‌’ ಎಂಬುದು ಹೆಚ್ಚು ಎತ್ತರಕ್ಕೆ ಏರಿದಾಗ ಉಂಟಾಗುವ ಅನಾರೋಗ್ಯ ಸಮಸ್ಯೆಯಾಗಿದೆ. ಆಮ್ಲಜನಕದ ಕೊರತೆ ಉಂಟಾಗಿ, ಅಸ್ವಸ್ಥಗೊಳ್ಳುತ್ತಾರೆ. ವಿಶ್ರಾಂತಿ ಪಡದರೂ ಉಸಿರಾಡಲು ಕೆಲವೊಮ್ಮೆ ಸಾಧ್ಯವಾಗದ ಸ್ಥಿತಿ ಇರುತ್ತದೆ.  

ಪ್ರತ್ಯೇಕ ಘಟನೆಗಳಲ್ಲಿ ಕೂಲಿ ಕಾರ್ಮಿಕರಾದ ದಿಲ್‌ ಬಹದ್ದೂರ್‌ ಗುರುಂಗ್‌ ಮತ್ತು ಸಮ್ಗಾ ಘಾಳೆ ಮತ್ತು ಚಾರಣಿಗರಾದ ರಾಮ್‌ ಬಹದ್ದೂರ್ ಥಾಪಾ ಮಗರ್, ಸೂರಜ್‌ ಮನ್‌ ಶ್ರೇಷ್ಠಾ ಅವರು ಸಾವಿಗೀಡಾಗಿದ್ದಾರೆ. 

ADVERTISEMENT

ಗುರುಂಗ್‌ ಮತ್ತು ಘಾಳೆ ವಿದೇಶಿ ಚಾರಣಿಗರ ಸರಕುಗಳನ್ನು ಹೊರುವ ಕೆಲಸ ಮಾಡುತ್ತಿದ್ದರು. ಚಾರಣದಿಂದ ಹಿಂದಿರುಗಿದ ಬಳಿಕ ಮಗರ್‌ ಅವರು ಹೋಟೆಲ್‌ನ ತಮ್ಮ ಕೊಠಡಿಯಲ್ಲಿ ಮೃತಪಟ್ಟಿದ್ದಾರೆ.

ನೇಪಾಳದ ಇನ್ನೊಬ್ಬ ಪ್ರಜೆ, ಸೂರಜ್‌ ಮನ್‌ ಶ್ರೇಷ್ಠಾ ಅವರು ಕಸ್ಕಿ ಜಿಲ್ಲೆಯಲ್ಲಿ ಚಾರಣ ಮಾಡುತ್ತಿದ್ದ ವೇಳೆ ‘ಆಲ್ಟಿಟ್ಯೂಡ್‌ ಸಿಕ್‌ನೆಸ್‌’ನಿಂದ ಬಳಲುತ್ತಿದ್ದರು. ಇವರು ಕೂಡ ಹೋಟೆಲ್‌ ಕೊಠಡಿಯಲ್ಲಿ ಶನಿವಾರ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ತಡೆ ಹಾಗೂ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. 

ಚಾರಣದ ಬಳಿಕ ಇದೇ ರೀತಿಯ ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದ ವಿದೇಶಿ ಪ್ರಜೆಯನ್ನು ರಕ್ಷಿಸಲಾಗಿದೆ. 

ನೇಪಾಳದ ಕಸ್ಕಿ, ಮುಸ್ತಾಂಗ್‌ ಸೇರಿದಂತೆ ಹಲವೆಡೆ ಚಾರಣ ಮಾಡಲು ವಿದೇಶಗಳಿಂದ ಹಲವಾರು ಪ್ರವಾಸಿಗರು ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.