
ನೇಪಾಳ ಜೆನ್–ಝಿ ಪ್ರತಿಭಟನೆ
ಕಠ್ಮಂಡು: ಸೆಪ್ಟೆಂಬರ್ ಕ್ರಾಂತಿಯ ಮೂಲಕ ಹೊಸ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದ ಜೆನ್ ಝಿ ಬಂಡಾಯಗಾರರು ಹಾಲಿ ಸರ್ಕಾರದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನಮ್ಮ ಹೋರಾಟದ ಆಶಯ ಈಡೇರಿಲ್ಲ. ಭ್ರಷ್ಟಾಚಾರವೂ ತಗ್ಗಿಲ್ಲ’ ಎಂದು ಭದ್ರತಾ ಪಡೆಗಳೊಂದಿಗಿನ ಸಂಘರ್ಷದಲ್ಲಿ ಕಾಲು ಕಳೆದುಕೊಂಡಿರುವ ಮುಕೇಶ್ ಅವಸ್ಥಿ ಬೇಸರದ ಮಾತುಗಳನ್ನಾಡಿದ್ದಾರೆ.
ಕ್ರಾಂತಿಯ ನಂತರ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆಗಿದ್ದ ಸುಶೀಲಾ ಕಾರ್ಕಿ ಅವರು ನೇಪಾಳದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಸ್ವಲ್ಪ ದಿನಗಳ ಬಳಿಕ ಮಾರ್ಚ್‌ನಲ್ಲಿ ಚುನಾವಣೆ ನಡೆಸುವುದಾಗಿ ಘೋಷಿಸಿದ್ದರು. ಇದು ಸಹ ಜೆನ್ ಝಿಗಳ ಟೀಕೆಗೆ ಕಾರಣವಾಗಿದೆ.
‘ಆಸ್ಟ್ರೇಲಿಯಾಗೆ ಓದಲಿಕ್ಕೆ ಹೋಗುವ ಬದಲು ಪ್ರತಿಭಟನೆಯಲ್ಲಿ ಭಾಗವಹಿಸಿದ ನನ್ನ ನಿರ್ಧಾರದ ಬಗ್ಗೆ ಬೇಸರವಾಗುತ್ತಿದೆ. ಏಕೆಂದರೆ, ಹೊಸ ಸರ್ಕಾರದ ಸಾಧನೆ ಶೂನ್ಯ’ ಎಂದು ಅವಸ್ಥಿ ಹೇಳಿದ್ದಾರೆ.
‘ಹೊಸ ಸರ್ಕಾರವು ಭ್ರಷ್ಟಾಚಾರಕ್ಕೆ ಅಂತ್ಯ ಹಾಡಲಿದೆ ಎಂಬ ನಮ್ಮ ನಿರೀಕ್ಷೆ ಹುಸಿಯಾಗಿದೆ. ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದವರನ್ನು ಇದುವರೆಗೂ ಬಂಧಿಸಿಲ್ಲ. ಆಗ ಅಧಿಕಾರದಲ್ಲಿದ್ದ ಯಾವೊಬ್ಬ ರಾಜಕಾರಣಿ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಭ್ರಷ್ಟಾಚಾರದ ಆರೋಪ ಹೊತ್ತವರು ಚುನಾವಣೆಗೆ ಸ್ಪರ್ಧಿಸಲು ಮತ್ತೆ ತಯಾರಿ ನಡೆಸಿರುವುದು ಮನಸ್ಸಿಗೆ ನೋವನ್ನುಂಟು ಮಾಡಿದೆ’ ಎಂದಿದ್ದಾರೆ.
‘ಮುಕೇಶ್ ಅವರಂತೆಯೇ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಲವರು ನೂತನ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ವಾರಗಳಿಂದಲೂ ಪ್ರಧಾನಿ ಕಚೇರಿ ಹೊರಭಾಗದಲ್ಲೂ ಪ್ರತಿಭಟನೆಗಳು ನಡೆದಿವೆ. ನಮ್ಮ ಆಶಯ ಈಡೇರದಿದ್ದಕ್ಕೆ ಮತ್ತೆ ಬೀದಿಗಿಳಿದು ಪ್ರತಿಭಟಿಸುತ್ತಿದ್ದೇವೆ’ ಎಂದು ಸುಮನ್ ಬೋಹರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.