ADVERTISEMENT

ನೇಪಾಳ: ಮಧ್ಯಂತರ ಸರ್ಕಾರ ರಚನೆ ಕಗ್ಗಂಟು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 16:08 IST
Last Updated 11 ಸೆಪ್ಟೆಂಬರ್ 2025, 16:08 IST
-
-   

ಕಠ್ಮಂಡು (ಪಿಟಿಐ): ದೇಶದಲ್ಲಿ ಮಧ್ಯಂತರ ಸರ್ಕಾರ ರಚನೆ ಕುರಿತಂತೆ ಬಿಕ್ಕಟ್ಟು ಮುಂದುವರಿದಿದೆ. ಮಧ್ಯಂತರ ಸರ್ಕಾರವನ್ನು ಯಾರು ಮುನ್ನಡೆಸಬೇಕು ಎಂಬುದಕ್ಕೆ ಸಂಬಂಧಿಸಿ,  ಅಧ್ಯಕ್ಷ ರಾಮಚಂದ್ರ ಪೌದೆಲ್‌ ಅವರೊಂದಿಗೆ ‘ಜೆನ್‌–ಝೀ’ ಗುಂಪಿನ ಪ್ರತಿನಿಧಿಗಳು ಗುರುವಾರ ಚರ್ಚೆ ನಡೆಸಿದರು.

‘ದೇಶದಲ್ಲಿನ ರಾಜಕೀಯ ಬಿಕ್ಕಟ್ಟಿಗೆ ಸಾಂವಿಧಾನಿಕ ಚೌಕಟ್ಟಿನಲ್ಲಿ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಎಲ್ಲರೂ ಶಾಂತತೆ ಕಾಪಾಡಬೇಕು’ ಎಂದು ಅಧ್ಯಕ್ಷ ಪೌದೆಲ್ ಅವರು ದೇಶದ ಜನರಿಗೆ ಮನವಿ ಮಾಡಿದ್ದಾರೆ.

ಭದ್ರಕಾಳಿಯಲ್ಲಿರುವ ಸೇನೆಯ ಕೇಂದ್ರ ಕಚೇರಿಯಲ್ಲಿ ನಡೆದ ಮಾತುಕತೆ ವೇಳೆ, ಸೇನೆ ಮುಖ್ಯಸ್ಥ ಅಶೋಕ ರಾಜ್‌ ಸಿಗ್ಡೇಲ್ ಕೂಡ ಇದ್ದರು ಎಂದು ಮೂಲಗಳು ಹೇಳಿವೆ.

ADVERTISEMENT

ಮಧ್ಯಂತರ ಸರ್ಕಾರ ಮುನ್ನಡೆಸುವುದಕ್ಕಾಗಿ, ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಸುಶೀಲಾ ಕಾರ್ಕಿ, ಕಠ್ಮಂಡು ಮೇಯರ್ ಬಾಲೇಂದ್ರ ಶಾ ಹಾಗೂ ಇತರ ಕೆಲವರ ಹೆಸರುಗಳನ್ನು ‘ಜೆನ್‌–ಝೀ’ ಗುಂಪು ಪ್ರಸ್ತಾಪಿಸಿದೆ ಎಂದು ಇವೇ ಮೂಲಗಳು ಹೇಳಿವೆ.

ಕೆಲ ಹೋರಾಟಗಾರರು, ನೇಪಾಳ ವಿದ್ಯುತ್‌ ಪ್ರಾಧಿಕಾರದ ಮಾಜಿ ಸಿಇಒ ಕುಲಮಾನ್‌ ಘೀಸಿಂಗ್‌ ಹೆಸರು ಪ್ರಸ್ತಾಪಿಸಿದರು ಎನ್ನಲಾಗಿದೆ.

ಬೆಂಬಲ: ‘ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಸುಶೀಲಾ ಕಾರ್ಕಿ ಅವರು ಮಧ್ಯಂತರ ಸರ್ಕಾರ ಮುನ್ನಡೆಸಬೇಕು ಎಂಬ ಪ್ರಸ್ತಾವಕ್ಕೆ ನನ್ನ ಬೆಂಬಲ ಇದೆ’ ಎಂದು ಕಠ್ಮಂಡು ಮೇಯರ್ ಬಾಲೇಂದ್ರ ಶಾ ಹೇಳಿದ್ದಾರೆ.

ಈ ಕುರಿತು ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದು, ‘ಚುನಾವಣೆ ನಡೆಸಿ, ದೇಶದಲ್ಲಿ ಹೊಸ ಸರ್ಕಾರ ಸ್ಥಾಪನೆ ಮಾಡುವ ಕೆಲಸವನ್ನು ಮಧ್ಯಂತರ ಸರ್ಕಾರದ ಮಾಡಬೇಕು’ ಎಂದೂ ಹೇಳಿದ್ದಾರೆ.

ಕುಲಮಾನ್‌ ಘೀಸಿಂಗ್‌
ಸುಶೀಲಾ ಕರ್ಕಿ
ದೇಶದ ಸಾರ್ವಭೌಮತೆ ಏಕತೆ ರಕ್ಷಿಸುವ ಹಾಗೂ ಆತ್ಮಗೌರವ ಕಾಪಾಡಿಕೊಳ್ಳುವ ದೊಡ್ಡ ಸವಾಲು ನಮ್ಮ ಮುಂದಿದೆ. ನೇಪಾಳಿ ಜನರ ಹಿತಾಸಕ್ತಿ ಕಾಪಾಡಲು ಹಾಗೂ ಅವರ ಏಳಿಗೆಗಾಗಿ ನಾವೆಲ್ಲ ಒಗ್ಗಟ್ಟಾಗುವ ಅಗತ್ಯವಿದೆ
ದಿವಾಕರ ದಂಗಲ್ ‘ಜೆನ್‌–ಝಿ’ ಹೋರಾಟಗಾರ
ದೇಶದ ನಾಯಕತ್ವ ವಹಿಸಿಕೊಳ್ಳುವುದು ನಮ್ಮ ಉದ್ದೇಶವಲ್ಲ. ನಾವು ಸರ್ಕಾರದ ಭಾಗವೂ ಆಗುವುದಿಲ್ಲ. ಆದರೆ ಆಡಳಿತದ ಕಾವಲುಗಾರರಂತೆ ನಾವು ಕಾರ್ಯನಿರ್ವಹಿಸುತ್ತೇವೆ
‘ಜೆನ್‌–ಝಿ’ ಹೋರಾಟಗಾರರು
ಮತ್ತೆ ಅದೇ ಹಳೆಯ ನಾಯಕರನ್ನೇ ಅಧಿಕಾರದಲ್ಲಿ ಕುಳ್ಳಿರಿಸಬಾರದು ಎಂದು ನಾನು ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ. ನಿಜವಾದ ಸುಧಾರಣೆಗಳನ್ನಷ್ಟೆ ನಾವು ಬಯಸುತ್ತೇವೆ
ಸುದನ್‌ ಗುರುಂಗ್ ‘ಜೆನ್‌–ಝಿ’ ನಾಯಕ 

ಸಂಸತ್‌ ವಿಸರ್ಜಿಸಿ ಸಂವಿಧಾನಕ್ಕೆ ತಿದ್ದುಪಡಿ ತನ್ನಿ: ಜೆನ್‌–ಝಿ’ ನಾಯಕರ ಬೇಡಿಕೆ

ಕಠ್ಮಂಡು(ಪಿಟಿಐ/ಎಎಫ್‌ಪಿ): ಸಂಸತ್ತನ್ನು ವಿಸರ್ಜಿಸಬೇಕು ಹಾಗೂ ದೇಶದ ಪ್ರಜೆಗಳ ಆಶಯಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ನೇಪಾಳದಾದ್ಯಂತ ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ಸಂಘಟಿಸಿದ್ದ ‘ಜೆನ್‌–ಝಿ’ ಗುಂಪು ಗುರುವಾರ ಒತ್ತಾಯಿಸಿದೆ.

‘ದೇಶದಲ್ಲಿ ನಿರ್ಮಾಣವಾಗಿರುವ ಬಿಕ್ಕಟ್ಟಿಗೆ ಮಾತುಕತೆ ಹಾಗೂ ಸಹಕಾರ ತತ್ವದಡಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ’ ಎಂದು ಸಂಘಟನೆ ಹೋರಾಟಗಾರರು ಪ್ರತಿಪಾದಿಸಿದರು. ‘ಜೆನ್‌–ಝಿ’ಯ ಕೆಲ ನಾಯಕರಾದ ಸುದನ್‌ ಗುರುಂಗ್ ದಿವಾಕರ ದಂಗಲ್ ಅಮಿತ್ ಬನಿಯಾ ಹಾಗೂ ಜುನಾಲ್ ದಂಗಲ್‌ ಸುದ್ದಿಗೋಷ್ಠಿ ನಡೆಸಿ ತಮ್ಮ ಬೇಡಿಕೆಗಳನ್ನು ಮಂಡಿಸಿದರು.

ಮತ್ತೊಂದೆಡೆ ಅವರ ಕೆಲ ಪ್ರತಿನಿಧಿಗಳು ಪ್ರಸಕ್ತ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಅಧ್ಯಕ್ಷ ರಾಮಚಂದ್ರ ಪೌದೆಲ್‌ ಅವರೊಂದಿಗೆ ಸಭೆ ನಡೆಸಿದರು. ‘ದೇಶದಲ್ಲಿ ಕೆಲದಿನಗಳ ಹಿಂದೆ ನಡೆದಿರುವುದು ನಾಗರಿಕ ಚಳವಳಿಯಷ್ಟೆ. ಇದನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡಲು ಯಾರೂ ಯತ್ನಿಸಬಾರದು’ ಎಂದು ಹೋರಾಟಗಾರರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸಂಸತ್‌ಅನ್ನು ವಿಸರ್ಜಿಸಬೇಕು ಎಂಬುದೇ ನಮ್ಮ ಮೊಟ್ಟಮೊದಲ ಬೇಡಿಕೆ’ ಎಂದು ಸುದನ್ ಗುರುಂಗ್ ಹೇಳಿದರು. ‘ರಾಜಕೀಯ ಪಕ್ಷಗಳು ತಮ್ಮ ಪಟ್ಟಭದ್ರ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ನಮ್ಮನ್ನು ಬಳಸಿಕೊಳ್ಳುಬಾರದು’ ಎಂದೂ ಎಚ್ಚರಿಸಿದರು. ‘ಸಂವಿಧಾನವನ್ನು ತಿರಸ್ಕರಿಸಬೇಕು ಎಂಬುದು ನಮ್ಮ ಉದ್ದೇಶವಲ್ಲ. ದೇಶದ ಜನರ ಕಳವಳಗಳನ್ನು ಒಳಗೊಳ್ಳುವ ರೀತಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು’ ಎಂದು ಹೋರಾಟಗಾರರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.