ADVERTISEMENT

ಭ್ರಷ್ಟಾಚಾರ ಆರೋಪ: ನೇಪಾಳಿ ಸಚಿವ ರಾಜ್‌ಕುಮಾರ್‌ ಗುಪ್ತಾ ರಾಜೀನಾಮೆ

ಪಿಟಿಐ
Published 15 ಜುಲೈ 2025, 10:53 IST
Last Updated 15 ಜುಲೈ 2025, 10:53 IST
   

ಕಠ್ಮಂಡು: ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ನೇಪಾಳದ ಫೆಡರಲ್ ವ್ಯವಹಾರ ಮತ್ತು ಸಾಮಾನ್ಯ ಆಡಳಿತ ಸಚಿವ ರಾಜ್‌ಕುಮಾರ್‌ ಗುಪ್ತಾ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ರಾಜ್‌ಕುಮಾರ್‌ ಗುಪ್ತಾ ಅವರು ಸರ್ಕಾರಿ ಅಧಿಕಾರಿಗಳ ನೇಮಕಾತಿ ಹಾಗೂ ವರ್ಗಾವಣೆಗೆ ಸಂಬಂಧಿಸಿದಂತೆ ಹಣ ಪಡೆಯುವ ಕುರಿತು ಮಾತನಾಡುತ್ತಿರುವ ಆಡಿಯೊಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು.

ಎರಡು ಬ್ಯಾಗ್‌ಗಳಲ್ಲಿ ಭ್ರಷ್ಟಾಚಾರದ ಹಣವಿರುವ ಚಿತ್ರ ಸಹಿತ ಅವರ ವಿರುದ್ಧ ಅಧಿಕಾರ ದುರುಪಯೋಗದ ತನಿಖಾ ಆಯೋಗ(ಸಿಐಎಎ)ದಲ್ಲಿ ದೂರು ಸಲ್ಲಿಸಲಾಗಿತ್ತು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್‌ಕುಮಾರ್‌ ಗುಪ್ತಾ ‘ಇದು ಸುಳ್ಳು ಆರೋಪವಾಗಿದೆ. ಕೆಲವು ಬಾರಿ ನಾವು ಸೇವಿಸದ ವಿಷವು ಕೂಡ ನಮಗೆ ಹಾನಿ ಮಾಡುತ್ತದೆ. ಪ್ರಕರಣದ ಪಾರದರ್ಶಕ ತನಿಖೆಗಾಗಿ ಪ್ರಧಾನಿ ಕೆ.ಪಿ. ಓಲಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ’ಎಂದಿದ್ದಾರೆ.

ಭ್ರಷ್ಟಾಚಾರದ ಆಡಿಯೊ ಪ್ರಸಾರವಾದ ನಂತರ, ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಗುಪ್ತಾ ಅವರ ರಾಜೀನಾಮೆಗೆ ಆಗ್ರಹಿಸಿದ್ದವು.

ಪ್ರಧಾನ ಮಂತ್ರಿ ಕೆ.ಪಿ. ಓಲಿ ಅವರು ರಾಜ್‌ಕುಮಾರ್‌ ಗುಪ್ತಾ ಅವರನ್ನು ತಮ್ಮ ಅಧಿಕೃತ ನಿವಾಸಕ್ಕೆ ಕರೆಸಿಕೊಂಡು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.