ADVERTISEMENT

ನೇಪಾಳ ಆಡಳಿತರೂಢ ಕಮ್ಯೂನಿಸ್ಟ್ ಪಕ್ಷದಿಂದ ಪ್ರಧಾನಿ ಒಲಿ ಉಚ್ಛಾಟನೆ

ಏಜೆನ್ಸೀಸ್
Published 24 ಜನವರಿ 2021, 15:32 IST
Last Updated 24 ಜನವರಿ 2021, 15:32 IST
ನೇಪಾಳ ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ
ನೇಪಾಳ ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ   

ಕಠ್ಮಂಡು: ನೇಪಾಳದಲ್ಲಿ ಆಡಳಿತಾರೂಢ ನೇಪಾಳ ಕಮ್ಯೂನಿಸ್ಟ್ ಪಕ್ಷದ (ಎನ್‌ಸಿಪಿ) ಆಂತರಿಕ ಬಿಕ್ಕಟ್ಟಿನ ನಡುವೆಯೂ ಭಾನುವಾರ ವಿರೋಧ ಬಣವು ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಿದೆ.

ನೇಪಾಳ ಸಂಸತ್ ಅನ್ನು ತುರ್ತಾಗಿ ವಿಸರ್ಜಿಸಿರುವ ಬೆನ್ನಲ್ಲೇ ರಾಜಕೀಯ ಅಸ್ಥಿರತೆ ಮನೆ ಮಾಡಿದೆ. ಈಗ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ.

ವಿರೋಧ ಬಣದ ವಕ್ತಾರ ನಾರಾಯಣಕಾಜಿ ಶ್ರೇಷ್ಠ ಪ್ರಕಾರ, ಪ್ರಧಾನಿ ಒಲಿ ಇನ್ನು ಮುಂದೆ ಎನ್‌ಸಿಪಿ ಪಕ್ಷದ ಸದಸ್ಯರಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಪೆರಿಸ್‌ ಡಾಂಡಾದಲ್ಲಿ ಸೇರಿದ ಇಂದಿನ ಕೇಂದ್ರ ಸಮಿತಿ ಸಭೆಯು ಪ್ರಧಾನಿ ಕೆ.ಪಿ. ಶರ್ಮಾ ಒಲಿಯನ್ನು ಪಕ್ಷದಿಂದ ಉಚ್ಛಾಟಿಸಲು ನಿರ್ಧರಿಸಿದೆ. ಇನ್ನು ಮುಂದೆ ಅವರು ನೇಪಾಳ ಕಮ್ಯೂನಿಸ್ಟ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಹೊಂದಿರುವುದಿಲ್ಲ ಎಂದು ಹೇಳಿದರು.

ಅಸಂವಿಧಾನಿಕ ನಿರ್ಧಾರ ತೆಗೆದುಕೊಂಡಿರುವ ಪ್ರಧಾನಿ ಒಲಿ ಅವರನ್ನು ಪಕ್ಷದಿಂದ ಏಕೆ ತೆಗೆದುಹಾಕಬಾರದು ಮತ್ತು ನೇಪಾಳ ಸಂಸತ್ ವಿಸರ್ಜಿಸಿದ ಹಿಂದಿನ ಕಾರಣಗಳನ್ನು ಕೇಳಿ ವಿರೋಧ ಬಣದ ಮಾಜಿ ಪ್ರಧಾನಿ ಪುಷ್ಪಾ ಕಮಲ್ ದಹಲ್ ಮತ್ತು ಮಾಧವ್ ಕುಮಾರ್ ನೋಟಿಸ್ ಜಾರಿಗೊಳಿಸಿದ್ದರು. ಆದರೆ ಪ್ರಧಾನಿ ಒಲಿ ಯಾವುದೇ ಸ್ಪಷ್ಟನೆ ನೀಡದಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ನಾವು ಬಹಳ ಸಮಯ ಕಾದೆವು. ಅವರು ನಮಗೆ ಉತ್ತರಿಸಲಿಲ್ಲ. ಹಾಗಾಗಿ ಪಕ್ಷದ ಕೇಂದ್ರ ಸಮಿತಿಯು ಪಕ್ಷದಿಂದ ಉಚ್ಛಾಟಿಸುವ ನಿರ್ಧಾರವನ್ನು ಕೈಗೊಂಡಿದೆ ಎಂದು ಶ್ರೇಷ್ಠ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.