ADVERTISEMENT

ಸಂಪುಟ ಪುನರ್‌ರಚನೆ: ನೇಪಾಳ ಪ್ರಧಾನಿ ಪ್ರಚಂಡ ನಿರ್ಧಾರ

ಪಿಟಿಐ
Published 28 ಫೆಬ್ರುವರಿ 2023, 13:19 IST
Last Updated 28 ಫೆಬ್ರುವರಿ 2023, 13:19 IST
ಪುಷ್ಪ ಕಮಲ್‌ ದಹಲ್‌
ಪುಷ್ಪ ಕಮಲ್‌ ದಹಲ್‌   

ಕಠ್ಮಂಡು: ಮೈತ್ರಿಕೂಟ ನೇತೃತ್ವದ ಸರ್ಕಾರದಿಂದ ಮೂರು ಅಂಗಪಕ್ಷಗಳು ಹೊರನಡೆದ ಕಾರಣ, ನೇಪಾಳ ಪ್ರಧಾನಿ ಪುಷ್ಪ ಕಮಲ್‌ ದಹಲ್‌ (ಪ್ರಚಂಡ) ಅವರು ಸಚಿವ ಸಂಪುಟ ಪುನರ ರಚನೆಗೆ ಮುಂದಾಗಿದ್ದಾರೆ.

ಮೂರು ಪಕ್ಷಗಳು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗದುಕೊಂಡ ಪರಿಣಾಮ, 16 ಸಚಿವ ಸ್ಥಾನಗಳು ತೆರವಾಗಿವೆ. ಈ ಬೆಳವಣಿಗೆಯಿಂದಾಗಿ ದುರ್ಬಲಗೊಂಡಿರುವ ಮೈತ್ರಿಕೂಟದ ಏಕತೆಯನ್ನು ಕಾಪಾಡುವ ಸವಾಲು ಪ್ರಧಾನಿ ಪ್ರಚಂಡ ಅವರ ಮುಂದಿದ್ದು, ಇದೇ ಕಾರಣಕ್ಕಾಗಿ ಅವರು ಸಂಪುಟ ಪುನರ್‌ರಚನೆಯ ಕಸರತ್ತು ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಎರಡನೇ ಅತಿ ದೊಡ್ಡ ಪಕ್ಷವಾದ ಸಿಪಿಎನ್‌–ಯುಎಂಎಲ್‌, ಪ್ರಚಂಡ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಸೋಮವಾರ ಹಿಂಪಡೆದಿತ್ತು. ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುವ ಪ್ರಚಂಡ ಅವರ ನಿರ್ಧಾರದಿಂದ ಅಸಮಾಧಾನಗೊಂಡಿದ್ದ ಸಿಪಿಎನ್‌–ಯುಎಂಎಲ್‌ ಸರ್ಕಾರದಿಂದ ಹೊರ ನಡೆಯಿತು. ಮತ್ತೊಂದು ಅಂಗಪಕ್ಷ ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿ (ಆರ್‌ಪಿಪಿ) ಸಹ ಸರ್ಕಾರದಿಂದ ಹೊರನಡೆದಿದೆ.

ADVERTISEMENT

ರಾಷ್ಟ್ರೀಯ ಸ್ವತಂತ್ರ ಪಾರ್ಟಿ (ಆರ್‌ಎಸ್‌ಪಿ) ಕೂಡ ಇದೇ ಹಾದಿ ತುಳಿದಿದ್ದರೂ, ಸರ್ಕಾರಕ್ಕೆ ಬಾಹ್ಯಬೆಂಬಲ ನೀಡುವುದಾಗಿ ಹೇಳಿದೆ. ಹೀಗಾಗಿ, ಮೈತ್ರಿಕೂಟದಲ್ಲಿ ಸದ್ಯ ನಾಲ್ಕು ಪಕ್ಷಗಳು ಉಳಿದಂತಾಗಿದೆ.

ಈಗ, ಪ್ರಧಾನಿ ಪ್ರಚಂಡ ಅವರು ನೇಪಾಳಿ ಕಾಂಗ್ರೆಸ್‌ ಹಾಗೂ ಇತರ ಆರು ಪಕ್ಷಗಳೊಂದಿಗೆ ಕೈಜೋಡಿಸಿದ್ದಾರೆ. ಈ ಪಕ್ಷಗಳಿಗೆ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಸರ್ಕಾರವನ್ನು ಭದ್ರಪಡಿಸುವ ಸೂತ್ರಕ್ಕೆ ಪ್ರಚಂಡ ಮೊರೆ ಹೋಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.