ನೇಪಾಳ ಜೆನ್–ಝಿ ಪ್ರತಿಭಟನೆ
ರಾಯಿಟರ್ಸ್
ಕಠ್ಮಂಡು: ಸಂಸತ್ತನ್ನು ವಿಸರ್ಜಿಸಬೇಕು ಹಾಗೂ ದೇಶದ ಪ್ರಜೆಗಳ ಆಶಯಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ನೇಪಾಳದಾದ್ಯಂತ ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ಸಂಘಟಿಸಿದ್ದ ‘ಜೆನ್–ಝಿ’ ಗುಂಪು ಗುರುವಾರ ಒತ್ತಾಯಿಸಿದೆ.
‘ದೇಶದಲ್ಲಿ ನಿರ್ಮಾಣವಾಗಿರುವ ಬಿಕ್ಕಟ್ಟಿಗೆ ಮಾತುಕತೆ ಹಾಗೂ ಸಹಕಾರ ತತ್ವದಡಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ’ ಎಂದು ಸಂಘಟನೆ ಹೋರಾಟಗಾರರು ಪ್ರತಿಪಾದಿಸಿದರು. ‘ಜೆನ್–ಝಿ’ಯ ಕೆಲ ನಾಯಕರಾದ ಸುದನ್ ಗುರುಂಗ್, ದಿವಾಕರ ದಂಗಲ್, ಅಮಿತ್ ಬನಿಯಾ ಹಾಗೂ ಜುನಾಲ್ ದಂಗಲ್ ಸುದ್ದಿಗೋಷ್ಠಿ ನಡೆಸಿ, ತಮ್ಮ ಬೇಡಿಕೆಗಳನ್ನು ಮಂಡಿಸಿದರು. ಮತ್ತೊಂದೆಡೆ, ಅವರ ಕೆಲ ಪ್ರತಿನಿಧಿಗಳು ಪ್ರಸಕ್ತ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಅಧ್ಯಕ್ಷ ರಾಮಚಂದ್ರ ಪೌದೆಲ್ ಅವರೊಂದಿಗೆ ಸಭೆ ನಡೆಸಿದರು.
‘ದೇಶದಲ್ಲಿ ಕೆಲದಿನಗಳ ಹಿಂದೆ ನಡೆದಿರುವುದು ನಾಗರಿಕ ಚಳವಳಿಯಷ್ಟೆ. ಇದನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡಲು ಯಾರೂ ಯತ್ನಿಸಬಾರದು’ ಎಂದು ಹೋರಾಟಗಾರರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಸಂಸತ್‌ಅನ್ನು ವಿಸರ್ಜಿಸಬೇಕು ಎಂಬುದೇ ನಮ್ಮ ಮೊಟ್ಟಮೊದಲ ಬೇಡಿಕೆ’ ಎಂದು ಸುದನ್ ಗುರುಂಗ್ ಹೇಳಿದರು.
‘ರಾಜಕೀಯ ಪಕ್ಷಗಳು ತಮ್ಮ ಪಟ್ಟಭದ್ರ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳುವು ದಕ್ಕಾಗಿ ನಮ್ಮನ್ನು ಬಳಸಿಕೊಳ್ಳುಬಾರದು’ ಎಂದೂ ಎಚ್ಚರಿಸಿದರು.
‘ಸಂವಿಧಾನವನ್ನು ತಿರಸ್ಕರಿಸಬೇಕು ಎಂಬುದು ನಮ್ಮ ಉದ್ದೇಶವಲ್ಲ. ದೇಶದ ಜನರ ಕಳವಳಗಳನ್ನು ಒಳಗೊಳ್ಳುವ ರೀತಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು’ ಎಂದು ಹೋರಾಟಗಾರರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.