ನೇಪಾಳ:
ಕಠ್ಮಂಡು: ನೇಪಾಳ ರಾಜಕಾರಣದಲ್ಲಿ ಸೋಮವಾರ ಮಧ್ಯರಾತ್ರಿ ಮಹತ್ವದ ಬೆಳವಣಿಗೆಯಾಗಿದ್ದು, ಪ್ರಧಾನಿ ಪ್ರಚಂಡ ಅವರ ಸರ್ಕಾರವನ್ನು ಉರುಳಿಸುವ ಸಲುವಾಗಿ ನೇಪಾಳಿ ಕಾಂಗ್ರೆಸ್ ಮತ್ತು ಸಿಪಿಎನ್–ಯುಎಂಎಲ್ ಪಕ್ಷಗಳು ಮೈತ್ರಿ ಮಾಡಿಕೊಂಡು ‘ರಾಷ್ಟ್ರೀಯ ಒಮ್ಮತದ ಸರ್ಕಾರ’ ರಚನೆಗೆ ಮುಂದಾಗಿವೆ.
ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೆವುಬಾ ಮತ್ತು ಕಮ್ಯುನಿಷ್ಟ್ ಪಾರ್ಟಿ ಆಫ್ ನೇಪಾಳ–ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್ (ಸಿಪಿಎನ್–ಯುಎಂಎಲ್) ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಕೆ.ಪಿ. ಶರ್ಮ ಒಲಿ ಅವರು ಮೈತ್ರಿಸರ್ಕಾರ ರಚನೆಗೆ ತೀರ್ಮಾನಿಸಿದ್ದಾರೆ.
‘ನೇಪಾಳ ಸಂಸತ್ತಿನ ಉಳಿದ ಅವಧಿಯಲ್ಲಿ ಪ್ರಧಾನಿ ಹುದ್ದೆ ಹಂಚಿಕೊಳ್ಳಲು ದೆವುಬಾ ಮತ್ತು ಒಲಿ ಒಪ್ಪಿಕೊಂಡಿದ್ದಾರೆ’ ಎಂದು ನೇಪಾಳಿ ಕಾಂಗ್ರೆಸ್‌ನ ಕೇಂದ್ರೀಯ ಸದಸ್ಯ ಸೌದ್ ಅವರು ತಿಳಿಸಿದ್ದಾರೆ.
89 ಸ್ಥಾನಗಳನ್ನು ಹೊಂದಿರುವ ನೇಪಾಳಿ ಕಾಂಗ್ರೆಸ್ ಸಂಸತ್ತಿನಲ್ಲಿ ಅತಿ ದೊಡ್ಡ ಪಕ್ಷವಾಗಿದೆ. ಸಿಪಿಎನ್–ಯುಎಂಎಲ್ 78 ಸ್ಥಾನಗಳನ್ನು ಹೊಂದಿದೆ. ಎರಡು ಪಕ್ಷಗಳ ಒಟ್ಟು ಸ್ಥಾನ 167 ಆಗಲಿದ್ದು, ಸರ್ಕಾರ ರಚನೆಗೆ ಅವಕಾಶ ಸಿಗುತ್ತದೆ. 275 ಸ್ಥಾನಗಳನ್ನು ಹೊಂದಿರುವ ನೇಪಾಳ ಸಂಸತ್ತಿನಲ್ಲಿ ಸರ್ಕಾರ ರಚನೆಗೆ 138 ಸಂಸದರ ಬೆಂಬಲ ಅಗತ್ಯವಾಗಿದೆ.
ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ನೇತೃತ್ವದ ಕಮ್ಯುನಿಷ್ಟ್ ಪಾರ್ಟಿ ಆಫ್ ನೇಪಾಳವು ಸಿಪಿಎನ್–ಯುಎಂಎಲ್ ಮತ್ತು ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು. ನಾಲ್ಕು ತಿಂಗಳ ಬಳಿಕ ಮೈತ್ರಿ ಕಡಿದುಕೊಳ್ಳಲು ತೀರ್ಮಾನಿಸಿರುವ ಸಿಪಿಎನ್–ಯುಎಂಎಲ್ ಅಧ್ಯಕ್ಷರು ಶನಿವಾರ ನೇಪಾಳಿ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದರು.
ವಿಶ್ವಾಸಮತ ಯಾಚನೆಯ ಬಳಿಕವೇ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಚಂಡ ಅವರು ತಮ್ಮ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದಾರೆ.
ಅಧಿಕಾರ ಹಂಚಿಕೆಯ ಒಪ್ಪಂದವು ಮಂಗಳವಾರ ಪೂರ್ಣಗೊಂಡಿದ್ದು, ಮೊದಲ ಅವಧಿಯಲ್ಲಿ ಒಲಿ ಅವರು ಪ್ರಧಾನಿಯಾಗಲಿದ್ದಾರೆ. ಒಂದೂವರೆ ವರ್ಷದ ಬಳಿಕ ದೆವುಬಾ ಅವರಿಗೆ ಅಧಿಕಾರ ಹಸ್ತಾಂತರಿಸುವ ಒಪ್ಪಂದ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.