ADVERTISEMENT

ಕೋವಿಡ್‌ ಕಠಿಣ ನಿಯಮ: ಸ್ವಂತ ಮದುವೆಯನ್ನೇ ರದ್ಧುಗೊಳಿಸಿದ ನ್ಯೂಜಿಲೆಂಡ್‌ ಪ್ರಧಾನಿ

ಏಜೆನ್ಸೀಸ್
Published 23 ಜನವರಿ 2022, 1:36 IST
Last Updated 23 ಜನವರಿ 2022, 1:36 IST
ನ್ಯೂಜಿಲೆಂಡ್‌ನ ಪ್ರಧಾನಿ ಜೆಸಿಂದಾ ಆರ್ಡೆನ್‌ (ಎಎಫ್‌ಪಿ ಚಿತ್ರ)
ನ್ಯೂಜಿಲೆಂಡ್‌ನ ಪ್ರಧಾನಿ ಜೆಸಿಂದಾ ಆರ್ಡೆನ್‌ (ಎಎಫ್‌ಪಿ ಚಿತ್ರ)   

ವೆಲ್ಲಿಂಗ್ಟನ್‌: ಓಮೈಕ್ರಾನ್‌ ಪ್ರಕರಣಗಳು ಹೆಚ್ಚಿದಂತೆ ಕೋವಿಡ್‌ ನಿಯಮಗಳನ್ನು ಕಠಿಣಗೊಳಿಸಿರುವ ನ್ಯೂಜಿಲೆಂಡ್‌ನ ಪ್ರಧಾನಿ ಜೆಸಿಂದಾ ಆರ್ಡೆನ್‌ ಅವರು ಸ್ವಂತ ಮದುವೆಯನ್ನೇ ರದ್ಧುಗೊಳಿಸಿದ್ದಾರೆ.

'ನನ್ನ ವಿವಾಹವು ಮುಂದಿನ ದಿನಗಳಲ್ಲಿ ನಡೆಯುವುದಿಲ್ಲ' ಎಂದು ಜೆಸಿಂದಾ ಭಾನುವಾರ ಸ್ಪಷ್ಟಪಡಿಸಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಕೋವಿಡ್ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ವಿವಾಹ ಸಮಾರಂಭಕ್ಕೆ ಪೂರ್ಣವಾಗಿ ಲಸಿಕೆ ಪಡೆದ 100 ಮಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.

ದೀರ್ಘಕಾಲದ ಜೊತೆಗಾರ ಕ್ಲಾರ್ಕ್‌ ಗೆಫಾರ್ಡ್‌ ಅವರ ಜೊತೆ ಆರ್ಡೆನ್ ಅವರ ವಿವಾಹವನ್ನು ಮುಂದಿನ ವಾರಗಳಲ್ಲಿ ನಿಶ್ಚಯಿಸಲಾಗಿತ್ತು. ಆದರೆ ದಿನಾಂಕವನ್ನು ಘೋಷಿಸಲಾಗಿರಲಿಲ್ಲ.

ADVERTISEMENT

ಕೋವಿಡ್‌ ಕಠಿಣ ನಿಯಮಗಳ ಹೇರಿಕೆಯಿಂದ ತಮ್ಮ ಮದುವೆ ರದ್ಧುಗೊಂಡ ಬಗೆಗಿನ ಪ್ರಶ್ನೆಗೆ 'ಜೀವನ ಎಂದರೆ ಹೀಗೆಯೇ' ಎಂದು ಜೆಸಿಂದಾ ಉತ್ತರಿಸಿದ್ದಾರೆ.

'ಸೋಂಕಿನಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾದ ನ್ಯೂಜಿಲೆಂಡ್‌ ಸಾವಿರಾರು ಮಂದಿಯಲ್ಲಿ ನಾನೂ ಒಬ್ಬಳು. ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಪ್ರೀತಿ ಪಾತ್ರರ ಜೊತೆಗೆ ಇರಲಾಗದೆ ಇರುವ ಸ್ಥಿತಿ ಕರುಳು ಹಿಂಡುವಂತದ್ದಾಗಿದೆ' ಎಂದರು.

ನ್ಯೂಜಿಲೆಂಡ್‌ನಲ್ಲಿ ಇದುವರೆಗೆ 15,104 ಕೋವಿಡ್‌ 19 ಪ್ರಕರಣಗಳು ವರದಿ ಆಗಿವೆ. 52 ಮಂದಿ ಕೋವಿಡ್‌ ಕಾರಣದಿಂದ ಮೃತರಾಗಿದ್ದಾರೆ. ಕಳೆದ 2 ವರ್ಷಗಳಿಂದ ಗಡಿಯಲ್ಲಿ ಕಠಿಣ ನಿಯಮಗಳನ್ನು ಪಾಲಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.