ADVERTISEMENT

ಇನ್ಫೊಸಿಸ್ ನಾರಾಯಣ ಮೂರ್ತಿ ಅಳಿಯ ಬ್ರಿಟನ್‌ ಹಣಕಾಸು ಸಚಿವ

ರಿಷಿ ಸುನಾಕ್‌ ನೇಮಿಸಿದ ಪ್ರಧಾನಿ ಬೋರಿಸ್‌

ಏಜೆನ್ಸೀಸ್
Published 13 ಫೆಬ್ರುವರಿ 2020, 14:18 IST
Last Updated 13 ಫೆಬ್ರುವರಿ 2020, 14:18 IST
ರಿಷಿ ಸುನಾಕ್‌
ರಿಷಿ ಸುನಾಕ್‌   

ಲಂಡನ್‌: ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್‌ ಅವರನ್ನು ಬ್ರಿಟನ್‌ನ ಹಣಕಾಸು ಸಚಿವರನ್ನಾಗಿ ಗುರುವಾರ ನೇಮಿಸಲಾಗಿದೆ. 39 ವರ್ಷದ ರಿಷಿ ಅವರು ಬ್ರಿಟನ್‌ ಸರ್ಕಾರದಲ್ಲಿನ ಎರಡನೇ ಅತ್ಯಂತ ಮಹತ್ವದ ಹುದ್ದೆಯನ್ನು ಅಲಂಕರಿಸಲಿದ್ದಾರೆ.

ಅಚ್ಚರಿಯ ಬೆಳವಣಿಗೆಯಲ್ಲಿ ಇದುವರೆಗೆ ಹಣಕಾಸು ಸಚಿವರಾಗಿದ್ದ ಪಾಕಿಸ್ತಾನ ಮೂಲದ ಸಾಜಿದ್‌ ಜಾವಿದ್‌ ಗುರುವಾರ ರಾಜೀನಾಮೆ ನೀಡಿದ ಬಳಿಕ ರಿಷಿ ಅವರನ್ನು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಈ ಹುದ್ದೆಗೆ ನೇಮಿಸಿದ್ದಾರೆ.

ಜಾನ್ಸನ್‌ ಅವರ ಜತೆ ಹಲವು ವಿಷಯಗಳಲ್ಲಿ ಜಾವಿದ್‌ ಭಿನ್ನಾಭಿಪ್ರಾಯ ಹೊಂದಿದ್ದರು. ತಮ್ಮ ಎಲ್ಲ ಆಪ್ತ ವಿಶೇಷ ಸಲಹೆಗಾರರನ್ನು ತೆಗೆದುಹಾಕಬೇಕು ಎಂದು ಜಾನ್ಸನ್‌ ಅವರ ಸೂಚನೆಯನ್ನು ಜಾವಿದ್‌ ತಳ್ಳಿ ಹಾಕಿದ್ದರು. ಜಾವಿದ್‌ ಅವರ ಜತೆ ಖಜಾನೆಯ ಮುಖ್ಯ ಕಾರ್ಯದರ್ಶಿಯಾಗಿ ರಿಷಿ ಸುನಾಕ್‌ ಇದುವರೆಗೆ ಕಾರ್ಯನಿರ್ವಹಿಸುತ್ತಿದ್ದರು.

ADVERTISEMENT

ಜನವರಿ 31ರಂದು ಐರೋಪ್ಯ ಒಕ್ಕೂಟದಿಂದ ದೂರವಾದ ನಂತರ ಮತ್ತು ಡಿಸೆಂಬರ್‌ನಲ್ಲಿ ನಡೆದಸಾರ್ವತ್ರಿಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಳಿಕ ಪ್ರಧಾನಿ ಜಾನ್ಸನ್‌, ಇದೇ ಮೊದಲ ಬಾರಿ ಸಚಿವ ಸಂಪುಟದ ಪುನರ್‌ ರಚನೆ ಮಾಡಿದ್ದಾರೆ.

ರಿಷಿ ಅವರು ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಅವರನ್ನು ವಿವಾಹವಾಗಿದ್ದಾರೆ. 2015ರಲ್ಲಿ ಮೊದಲ ಬಾರಿ ಬ್ರಿಟನ್‌ ಸಂಸತ್‌ ಪ್ರವೇಶಿಸಿದ ರಿಷಿ, ಕನ್ಸರ್ವೆಟಿವ್‌ ಪಕ್ಷದ ಪ್ರಮುಖ ನಾಯಕ. ಜಾನ್ಸನ್‌ ಅವರ ಕಟ್ಟಾ ಬೆಂಬಲಿಗರಾದರಿಷಿಸರ್ಕಾರದ ಪ್ರಮುಖ ನೀತಿ ನಿರೂಪಣೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.

ರಾಜಕೀಯ ಸೇರುವ ಮುನ್ನ ರಿಷಿ ಸುನಾಕ್‌ ಅವರು, ಒಂದು ಶತಕೋಟಿ ಪೌಂಡ್‌ ಮೊತ್ತದ ಜಾಗತಿಕ ಉದ್ಯಮವನ್ನು ಸ್ಥಾಪಿಸಿದ್ದರು. ಭಾರತ ಮೂಲದಇನ್ನೊಬ್ಬ ಸಂಸದಅಲೋಕ್‌ ಶರ್ಮಾ ಅವರನ್ನು ಸಹ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದ್ದು, ಉದ್ಯಮ ಖಾತೆ ನೀಡಲಾಗಿದೆ.

ಬ್ರಿಟನ್‌ ಸರ್ಕಾರದಲ್ಲಿ ಗೃಹ ಕಾರ್ಯದರ್ಶಿಯಾಗಿ ಭಾರತ ಮೂಲದ ಪ್ರೀತಿ ಪಟೇಲ್‌ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.