ADVERTISEMENT

ನಿಷೇಧಿತ ಪಿಎಫ್‌ಐಗೆ ಹಣಕಾಸು ನೆರವು: ಐವರನ್ನು ಬಂಧಿಸಿದ ಎನ್‌ಐಎ

ಪಿಟಿಐ
Published 7 ಮಾರ್ಚ್ 2023, 20:52 IST
Last Updated 7 ಮಾರ್ಚ್ 2023, 20:52 IST
-
-   

ನವದೆಹಲಿ: ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ನಿಷೇಧಿತ ಪಿಎಫ್‌ಐ ಸಂಘಟನೆಗೆ ಹಣ ಒದಗಿಸುತ್ತಿದ್ದ ಹವಾಲಾ ಜಾಲವೊಂದನ್ನು ಭೇದಿಸಿ, ಕರ್ನಾಟಕದ ನಾಲ್ವರು ಸೇರಿ ಐದು ಜನರನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ತಿಳಿಸಿದೆ.

‘ಸಂಘಟನೆಯ ಸದಸ್ಯರಾದ, ಕರ್ನಾಟಕದ ಮಹಮ್ಮದ್‌ ಸಿನಾನ್, ಸರ್ಫರಾಜ್ ನವಾಜ್, ಇಕ್ಬಾಲ್‌, ಅಬ್ದುಲ್‌ ರಫೀಕ್ ಎಂ. ಹಾಗೂ ಕೇರಳದ ಅಬಿದ್ ಕೆ.ಎಂ. ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರನ್ನು ಪಟ್ನಾದ ವಿಶೇಷ ಎನ್‌ಐಎ ಕೋರ್ಟ್‌ಗೆ ಹಾಜರುಪಡಿಸಲಾಗುವುದು’ ಎಂದು ಎನ್‌ಐಎ ವಕ್ತಾರ ತಿಳಿಸಿದ್ದಾರೆ.

‘ಕೇರಳದ ಕಾಸರಗೋಡು, ಕರ್ನಾಟಕದ ದಕ್ಷಿಣ ಕನ್ನಡ ಸೇರಿದಂತೆ ಒಟ್ಟು ಎಂಟು ಸ್ಥಳಗಳಲ್ಲಿ ಎನ್ಐಎ ತಂಡಗಳು ಕಳೆದ ಭಾನುವಾರದಿಂದ ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದವು. ಈ ಸಂದರ್ಭದಲ್ಲಿ ವಿವಿಧ ಬಗೆಯ ಡಿಜಿಟಲ್‌ ಸಾಧನಗಳನ್ನು, ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿರುವುದನ್ನು ತೋರಿಸುವ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಕಳೆದ ವರ್ಷ ಸೆಪ್ಟೆಂಬರ್‌ 27ರಂದು ಪಿಎಫ್ಐ ಅನ್ನು ನಿಷೇಧಿಸಲಾಗಿತ್ತು. ಆದಾಗ್ಯೂ, ತಮ್ಮ ಹಿಂಸಾತ್ಮಕ ತೀವ್ರಗಾಮಿ ಸಿದ್ಧಾಂತದ ಪ್ರಚಾರವನ್ನು ನಿಷೇಧಿತ ಸಂಘಟನೆಯ ಮುಖಂಡರು ಮುಂದುವರಿಸಿದ್ದರು. ಅಪರಾಧಿಕ ಕೃತ್ಯಗಳಿಗೆ ಶಸ್ತ್ರಾಸ್ತ್ರಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತಿದ್ದರು’ ಎಂದು ತಿಳಿಸಿದ್ದಾರೆ.

‘ನಿಷೇಧಿತ ಪಿಎಫ್‌ಐಗೆ ಹವಾಲಾ ಮಾರ್ಗದ ಮೂಲಕ ಹಣ ಒದಗಿಸುತ್ತಿದ್ದ ಜಾಲದ ಮೂಲ ಯುಎಇಯಲ್ಲಿದ್ದು, ಕರ್ನಾಟಕ ಹಾಗೂ ಬಿಹಾರದಿಂದ ಈ ಜಾಲವು ಸಕ್ರಿಯವಾಗಿದ್ದ ಅಂಶ ಈ ಐವರ ಬಂಧನದಿಂದ ಗೊತ್ತಾಗಿದೆ. ವಿದೇಶಗಳಿಂದ ಸಂಗ್ರಹಿಸುತ್ತಿದ್ದ ಹಣವನ್ನು ಬಂಧಿತ ಈ ಐವರು ಸಂಘಟನೆಯ ಮುಖಂಡರು ಹಾಗೂ ಸದಸ್ಯರಿಗೆ ತಲುಪಿಸುತ್ತಿದ್ದರು’ ಎಂದು ವಕ್ತಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.