ADVERTISEMENT

ಸಂಪರ್ಕ ಕಚೇರಿ ಧ್ವಂಸಗೊಳಿಸಿದ ಉತ್ತರ ಕೊರಿಯಾ

ಏಜೆನ್ಸೀಸ್
Published 16 ಜೂನ್ 2020, 11:14 IST
Last Updated 16 ಜೂನ್ 2020, 11:14 IST
ಸಂಪರ್ಕ ಕಚೇರಿ ಮೇಲೆ ದಾಳಿ ನಡೆಸಿದಾಗಿ ಕಾಣಿಸಿದ ಹೊಗೆ–ಎಎಫ್‌ಪಿ ಚಿತ್ರ
ಸಂಪರ್ಕ ಕಚೇರಿ ಮೇಲೆ ದಾಳಿ ನಡೆಸಿದಾಗಿ ಕಾಣಿಸಿದ ಹೊಗೆ–ಎಎಫ್‌ಪಿ ಚಿತ್ರ   

ಸೋಲ್: ಅಂತರ್ ಕೊರಿಯಾ ಸಂಪರ್ಕ ಕಚೇರಿ ಧ್ವಂಸ ಮಾಡಿರುವುದನ್ನು ಉತ್ತರ ಕೊರಿಯಾ ಮಂಗಳವಾರ ಖಚಿತಪಡಿಸಿದೆ. ಅಮೆರಿಕದ ಜತೆ ಪರಮಾಣು ಮಾತುಕತೆ ಸ್ಥಗಿತಗೊಂಡ ಬೆನ್ನಲ್ಲೇ, ತನ್ನ ವೈರಿ ದೇಶ ದಕ್ಷಿಣ ಕೊರಿಯಾ ಮೇಲೆ ಒತ್ತಡ ಹೇರುವ ಯತ್ನವನ್ನು ಉತ್ತರ ಕೊರಿಯಾ ಮುಂದುವರಿಸಿದೆ.

‘ತ‌ಪ್ಪೆಗಿಸಿದವರು ಮತ್ತು ಅವರನ್ನು ಬೆಂಬಲಿಸಿದವರಿಗೆ ಧೈರ್ಯದಿಂದ ಪಾಠ ಕಲಿಸಲು ಕೋಪೋದ್ರಿಕ್ತ ಜನರ ಮನಸ್ಸು ಬಯಸುತ್ತದೆ’ ಎಂದು ಹೇಳಿರುವ ಉತ್ತರ ಕೊರಿಯಾದ ಸರ್ಕಾರಿ ಸುದ್ದಿ ಸಂಸ್ಥೆ ಸೆಂಟ್ರಲ್ ನ್ಯೂಸ್ ಏಜೆನ್ಸಿ,ಕಚೇರಿ ಧ್ವಂಸ ಮಾಡಿರುವ ಘಟನೆಯನ್ನು ಖಚಿತಪಡಿಸಿದೆ. ಗಡಿಯಲ್ಲಿ ಉತ್ತರ ಕೊರಿಯಾ ವಿರೋಧಿ ಕರಪತ್ರಗಳನ್ನು ಹಂಚಿಸುತ್ತಿರುವ ದಕ್ಷಿಣ ಕೊರಿಯಾದ ಚಿತಾವಣೆಯನ್ನು ಈ ಮೂಲಕ ಪರೋಕ್ಷವಾಗಿ ಉಲ್ಲೇಖಿಸಿದೆ.

ಕಚೇರಿಯನ್ನು ಹೇಗೆ ನಾಶಪಡಿಸಲಾಯಿತು ಎಂದು ಸುದ್ದಿಸಂಸ್ಥೆ ಸ್ಪಷ್ಟವಾಗಿ ಹೇಳಿಲ್ಲ. ಆದರೆ ಭಯಾನಕ ಸ್ಫೋಟ ನಡೆದಿದೆ ಎಂದು ತಿಳಿಸಿದೆ.

ADVERTISEMENT

ಅಮೆರಿಕದ ಜೊತೆ ಪರಮಾಣು ಮಾತುಕತೆಯಲ್ಲಿ ತನಗೆ ಬೇಕಾದ ವಿನಾಯಿತಿ ಸಿಗದ ಕಾರಣ ಉತ್ತರ ಕೊರಿಯಾವು ದಕ್ಷಿಣ ಕೊರಿಯಾ ಮೇಲೆ ಒತ್ತಡ ಹೇರುವ ಯತ್ನ ಮುಂದುವರಿಸುತ್ತಿದೆ. ದ್ವಿಪಕ್ಷೀಯ ಸಂಬಂಧ ಹಳಸಿರುವುದು ಹಾಗೂ ದೇಶವಿರೋಧಿ ಕರಪತ್ರ ಹಂಚುತ್ತಿರುವ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳದ ದಕ್ಷಿಣ ಕೊರಿಯಾ ವಿರುದ್ಧ ಉತ್ತರ ಕೊರಿಯಾ ಪದೇ ಪದೇ ದೂರುತ್ತಿದೆ.

ದಕ್ಷಿಣ ಕೊರಿಯಾ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವುದಾಗಿ ಉತ್ತರ ಕೊರಿಯಾ ಬೆದರಿಕೆ ಹಾಕಿದ ಬೆನ್ನಲ್ಲೇ ಸಂಪರ್ಕ ಕಚೇರಿ ಧ್ವಂಸಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.