ADVERTISEMENT

ಮೆಹುಲ್‌ ಚೋಕ್ಸಿ ಅಪಹರಣದ ಬಗ್ಗೆ ನಿರ್ಣಾಯಕ ಪುರಾವೆಗಳಿಲ್ಲ: ಆಂಟಿಗುವಾ ಪ್ರಧಾನಿ

ಪಿಟಿಐ
Published 23 ಜೂನ್ 2021, 3:09 IST
Last Updated 23 ಜೂನ್ 2021, 3:09 IST
ಮೆಹುಲ್‌ ಚೋಕ್ಸಿ
ಮೆಹುಲ್‌ ಚೋಕ್ಸಿ   

ಡೊಮಿನಿಕಾ: ಡೊಮಿನಿಕಾದಲ್ಲಿ ಬಂಧಿತರಾಗಿರುವ ವಜ್ರವ್ಯಾಪಾರಿ ಮೆಹುಲ್‌ ಚೋಕ್ಸಿ ಅವರ ಅಪಹರಣದ ಬಗ್ಗೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ ಎಂದು ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗಾಸ್ಟನ್ ಬ್ರೌನ್ ಹೇಳಿದ್ದಾರೆ.

ಮೆಹುಲ್‌ ಚೋಕ್ಸಿ ಅವರನ್ನು ಅಪಹರಿಸಲಾಗಿದೆ ಎಂಬ ಮಾತುಗಳು ಇತ್ತೀಚಿಗೆ ಕೇಳಿ ಬಂದಿದ್ದವು.

ಚೋಕ್ಸಿ ‘ಅಪಹರಣ’ ಪ್ರಕರಣ ಕುರಿತು ಅಲ್ಲಿನ ಸಂಸತ್ತಿನಲ್ಲಿ ಪ್ರಶ್ನಿಸಿದ ಪ್ರತಿಪಕ್ಷದ ಸಂಸದರು, ‘ಸ್ಕಾಟ್ಲೆಂಡ್ ಯಾರ್ಡ್ ಅಥವಾ ಇನ್ನಾವುದೇ ತನಿಖಾ ಸಂಸ್ಥೆಯು ಚೋಕ್ಸಿ ಅವರನ್ನು ಡೊಮಿನಿಕಾಗೆ ಕರೆದೊಯ್ದಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿವೆಯೇ’ ಎಂದು ಕೇಳಿದ್ದರು.

ADVERTISEMENT

ಇದಕ್ಕೆ ಉತ್ತರಿಸಿರುವ ಗಾಸ್ಟನ್ ಬ್ರೌನ್, ‘ಚೋಕ್ಸಿ ಅಪಹರಣ ಪ್ರಕರಣ ಸಂಬಂಧ ಲಭ್ಯವಾಗಿರುವ ಸಾಕ್ಷ್ಯಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಮೆಹುಲ್ ಚೋಕ್ಸಿಯನ್ನು ಅಪಹರಿಸಲಾಗಿದೆ ಎಂದು ಮಾತುಗಳು ಕೇಳಿ ಬರುತ್ತಿವೆ’ ಎಂದರು.

ಚೋಕ್ಸಿ ಅವರನ್ನು ಆಂಟಿಗುವಾದಿಂದ ಡೊಮಿನಿಕಾಗೆ ಕರೆದೊಯ್ಯುವ ಕಾರ್ಯಾಚರಣೆಯಲ್ಲಿ ಭಾರತ ಮೂಲದವರೂ ಭಾಗಿಯಾಗಿದ್ದಾರೆ ಎಂಬುದನ್ನು ಬಿಂಬಿಸಿ ಕೆಲವು ಚಿತ್ರಗಳು ಮತ್ತು ವಿಡಿಯೊಗಳನ್ನು ಚೋಕ್ಸಿಯ ಕಾನೂನು ತಂಡವು ಬಿಡುಗಡೆ ಮಾಡಿದೆ ಎಂದೂ ʼಆಂಟಿಗುವಾ ನ್ಯೂಸ್‌ ರೂಂʼ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಸುಮಾರು ₹13,500 ಕೋಟಿ ವಂಚಿಸಿದ ಆರೋಪ ಹೊತ್ತಿರುವ ಚೋಕ್ಸಿ, ಆಂಟಿಗುವಾ, ಬಾರ್ಬುಡಾಗೆ ಪರಾರಿಯಾಗಿ 2018ರಲ್ಲಿ ಅಲ್ಲಿನ ಪೌರತ್ವ ಪಡೆದಿದ್ದರು. ಮೇ 23ರಂದು ಅಲ್ಲಿಂದ ತಪ್ಪಿಸಿಕೊಂಡು ಡೊಮಿನಿಕಾಗೆ ಅಕ್ರಮ ಪ್ರವೇಶ ಪಡೆದ ಕಾರಣ ಪೊಲೀಸರು ಬಂಧಿಸಿದ್ದರು. ಚೋಕ್ಸಿಯನ್ನು ಭಾರತಕ್ಕೆ ಕರೆ ತರಲು ತನಿಖಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ.

ಮತ್ತಷ್ಟು ಸುದ್ದಿಗಳು
* ಡೊಮಿನಿಕಾ: ಅನಾರೋಗ್ಯ ಕಾರಣ ಮೆಹುಲ್ ಚೋಕ್ಸಿ ಆಸ್ಪತ್ರೆ ವಾಸ ಮುಂದುವರಿಕೆ
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.