ಜಿನೀವಾ: ‘ದಕ್ಷಿಣ ಆಫ್ರಿಕಾದಲ್ಲಿ ಈ ಹಿಂದೆ ಬೇರೆ ತಳಿಯ ಕೊರೊನಾ ವೈರಾಣುಗಳು ಸೋಂಕು ಹರಡಿದ್ದಕ್ಕಿಂತಲೂ ಮೂರು ಪಟ್ಟು ಹೆಚ್ಚು ತ್ವರಿತವಾಗಿ ಓಮೈ ಕ್ರಾನ್‌ನಿಂದ ಮರು ಸೋಂಕು ಹರಡುತ್ತಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರು ಹೇಳಿದ್ದಾರೆ.
ಓಮೈಕ್ರಾನ್ ರೂಪಾಂತರ ತಳಿಗೆ ಸಂಬಂಧಿಸಿದಂತೆ ಈವರೆಗೆ ಲಭ್ಯವಿರುವ ಮಾಹಿತಿಗಳು ಮತ್ತು ನಡೆಯುತ್ತಿರುವ ಅಧ್ಯಯನಗಳ ವಿವರವನ್ನು ಅವರು ರಾಯಿಟರ್ಸ್ ಜತೆಗೆ ಹಂಚಿಕೊಂಡಿದ್ದಾರೆ.
‘ಓಮೈಕ್ರಾನ್ ಹೇಗೆ ರೂಪಾಂತರವಾಗುತ್ತದೆ, ಅದರ ಸ್ಪೈಕ್ ಪ್ರೊಟೀನ್ ಗಳು ಹೇಗೆ ವರ್ತಿಸುತ್ತವೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಅದನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಅಲ್ಲದೆ, ನಾವು ಓಮೈಕ್ರಾನ್‌ನ ಸ್ಪೈಕ್ ಪ್ರೊಟೀನ್ ಹೊರತುಪಡಿಸಿ ಬೇರೆ ಆಯಾಮಗಳಲ್ಲೂ ಪರಿಶೀಲನೆ ನಡೆಸ ಬೇಕಾದ ಅನಿವಾರ್ಯ ಇದೆ. ಓಮೈಕ್ರಾನ್ ಕುರಿತ ಅಧ್ಯಯನಗಳು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ನಿರ್ಧರಿಸಲು ಇದೇ ಸೋಮವಾರ ತಜ್ಞರ ಸಭೆ ನಡೆಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.
‘ಈಗ ಕೋವಿಡ್ ತಡೆಗಟ್ಟಲು ನೀಡಲಾಗುತ್ತಿರುವ ಲಸಿಕೆಗಳು ಓಮೈಕ್ರಾನ್ ವಿರುದ್ಧ ಪರಿಣಾಮಕಾರಿಯಲ್ಲ ಎಂಬುದು ದೃಢಪಟ್ಟಿಲ್ಲ. ಅದನ್ನು ಪತ್ತೆ ಮಾಡುವ ಅಧ್ಯಯನಗಳು ನಡೆಯುತ್ತಿವೆ. ಈ ಅಧ್ಯಯನಗಳು ಪೂರ್ಣವಾಗಲು ಇನ್ನೂ ಒಂದು ಅಥವಾ ಎರಡು ವಾರ ಬೇಕಾಗಬಹುದು. ಅಲ್ಲಿಯವರೆಗೂ ನಾವು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ಅವರು ವಿವರಿಸಿದ್ದಾರೆ.
‘ಈಗ ಬಳಸಲಾಗುತ್ತಿರುವ ಲಸಿಕೆಗಳನ್ನು ಮಾರ್ಪಾಡು ಮಾಡಬೇಕು ಎಂದು ಹೇಳಲು ಸಾಧ್ಯವಿಲ್ಲ, ಮಾರ್ಪಡಿಸುವ ಅವಶ್ಯಕತೆ ಇಲ್ಲ ಎಂದು ಹೇಳಲೂ ಸಾಧ್ಯವಿಲ್ಲ. ಆದರೆ ಓಮೈಕ್ರಾನ್‌ನಿಂದ ಕೋವಿಡ್ ತಗುಲಿರುವವರಲ್ಲಿ ರೋಗದ ತೀವ್ರತೆ ಅತ್ಯಂತ ಕಡಿಮೆ ಇದೆ. ಇದನ್ನು ಗಮನಿಸಿದರೆ ಓಮೈಕ್ರಾನ್ ವಿರುದ್ಧ ಈ ಲಸಿಕೆಗಳು ಸ್ವಲ್ಪಮಟ್ಟದ ರಕ್ಷಣೆ ನೀಡುತ್ತಿವೆ ಎಂಬುದು ಗೊತ್ತಾಗುತ್ತದೆ’ ಎಂದು ಡಾ.ಸೌಮ್ಯ ಸ್ವಾಮಿನಾಥನ್ ಅವರು ವಿವರಿಸಿದ್ದಾರೆ.
ಮೂಲ ಪತ್ತೆ ಕಷ್ಟ: ಸೌಮ್ಯ ಸ್ವಾಮಿನಾಥನ್
‘ಓಮೈಕ್ರಾನ್ ರೂಪಾಂತರ ತಳಿಯನ್ನು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಮೊದಲು ಪತ್ತೆ ಮಾಡಿದ್ದಾರೆ. ಅದೊಂದೇ ಕಾರಣಕ್ಕೆ ದಕ್ಷಿಣ ಆಫ್ರಿಕಾದಲ್ಲೇ ಓಮೈಕ್ರಾನ್ ವಿಕಾಸವಾಗಿದೆ ಎಂದಲ್ಲ. ಅದು ಬೇರೆ ದೇಶಗಳಲ್ಲಿ ವಿಕಾಸವಾಗಿರ ಬಹುದು. ಬಹುಶಃ ವೈರಾಣು ಸಂರಚಣೆ ವಿಶ್ಲೇಷಣೆ ಇಲ್ಲದೇ ಇರುವ ದೇಶ ಗಳಲ್ಲಿ ಇದು ವಿಕಾಸವಾಗಿರಬಹುದು. ಆದರೆ ಈಗಿನ ಪರಿಸ್ಥಿತಿ ಗಮನಿಸಿದರೆ, ಓಮೈಕ್ರಾನ್ ಮೊದಲು ವಿಕಾಸವಾಗಿದ್ದು ಎಲ್ಲಿ ಎಂಬುದು ಪತ್ತೆಯಾಗದೇ ಇರುವ ಸಾಧ್ಯತೆಯೇ ಹೆಚ್ಚು’ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
* ಗಾಬರಿಯಾಗುವ ಅಗತ್ಯವಿಲ್ಲ. ಈ ಹಿಂದೆ ಬೇರೆ ತಳಿಗಳನ್ನು ಎದುರಿಸಿದ ಅನುಭವದ ಆಧಾರದಲ್ಲೇ ಓಮೈಕ್ರಾನ್ ತಡೆಗಟ್ಟಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು.
-ಸೌಮ್ಯ ಸ್ವಾಮಿನಾಥನ್, ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.