ADVERTISEMENT

ಸಮುದ್ರದತ್ತ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ

ಏಜೆನ್ಸೀಸ್
Published 27 ಫೆಬ್ರುವರಿ 2022, 7:15 IST
Last Updated 27 ಫೆಬ್ರುವರಿ 2022, 7:15 IST
ಕಿಮ್‌ ಜಾಂಗ್‌ ಉನ್‌
ಕಿಮ್‌ ಜಾಂಗ್‌ ಉನ್‌    

ಸೋಲ್‌: ಉತ್ತರ ಕೊರಿಯಾ ಭಾನುವಾರ ಖಂಡಾಂತರ ಕ್ಷಿಪಣಿಯೊಂದನ್ನು ಸಮುದ್ರದ ಕಡೆಗೆ ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾ ಮತ್ತು ಜಪಾನ್ ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ಉತ್ತರ ಕೊರಿಯಾ ನಡೆಸಿದ ಎಂಟನೇ ಕ್ಷಿಪಣಿ ಪರೀಕ್ಷೆ ಇದಾಗಿದೆ.

ಉಡಾವಣೆಯ ಬಗ್ಗೆ ಹೆಚ್ಚಿನ ವಿವರ ಉತ್ತರ ಕೊರಿಯಾದಿಂದ ಲಭ್ಯವಾಗಿಲ್ಲ ಎಂದು ದಕ್ಷಿಣ ಕೊರಿಯಾದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ಮಾಹಿತಿಯನ್ನು ಜಪಾನ್ ರಕ್ಷಣಾ ಸಚಿವಾಲಯವೂ ಖಚಿತಪಡಿಸಿದೆ.

ಉತ್ತರ ಕೊರಿಯಾದಿಂದ ಖಂಡಾಂತರ ಕ್ಷಿಪಣಿಯೊಂದನ್ನು ಉಡಾಯಿಸಲಾಗಿದೆ. ಅದು, ಸಮುದ್ರದಲ್ಲಿ ಬಿದ್ದಿರುವ ಸಾಧ್ಯತೆಗಳಿವೆ. ಈ ಪ್ರದೇಶದಲ್ಲಿನ ಹಡಗುಗಳು ಎಚ್ಚರ ವಹಿಸಬೇಕು ಎಂದು ಜಪಾನ್‌ನ ಕರಾವಳಿ ಭದ್ರತಾ ಪಡೆಯ ಅಧಿಕಾರಿಗಳಿಗೆ ಎಚ್ಚರಿಕೆ ರವಾನಿಸಿದೆ ಎನ್ನಲಾಗಿದೆ.

ADVERTISEMENT

ಉತ್ತರ ಕೊರಿಯಾ ಕಳೆದ ತಿಂಗಳು ಏಳನೇ ಸುತ್ತಿನ ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಶಸ್ತ್ರಾಸ್ತ್ರ ತಂತ್ರಜ್ಞಾನವನ್ನು ಪರಿಪೂರ್ಣಗೊಳಿಸುವ ಪ್ರಯತ್ನದ ಭಾಗವಾಗಿ ಈ ಪರೀಕ್ಷೆ ನಡೆದಿದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದರು. ದೇಶದ ಮೇಲೆ ವಿಧಿಸಿರುವ ಆರ್ಥಿಕ ನಿರ್ಬಂಧಗಳನ್ನು ಸಡಿಲಿಸುವಂತೆ ಅಮೆರಿಕದ ಮೇಲೆ ಒತ್ತಡ ಹೇರಲು ಈ ತಂತ್ರ ಮಾಡಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದರು.

ಚೀನಾದಲ್ಲಿ ಚಳಿಗಾಲದ ಒಲಿಂಪಿಕ್ಸ್ ಆರಂಭವಾದ ಬಳಿಕ ಉತ್ತರ ಕೊರಿಯಾದ ಶಸ್ತ್ರಾಸ್ತ್ರ ಪರೀಕ್ಷಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಚೀನಾವು ಉತ್ತರ ಕೊರಿಯಾದ ಏಕೈಕ ಮಿತ್ರರಾಷ್ಟ್ರ. ಚಳಿಗಾಲದ ಒಲಿಂಪಿಕ್ಸ್‌ ಮುಗಿದ ಕೂಡಲೇ ಉತ್ತರ ಕೊರಿಯಾದಿಂದ ದೊಡ್ಡಮಟ್ಟದ ಪ್ರಯೋಗಗಳು ನಡೆಯಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.