ADVERTISEMENT

ಉತ್ತರ ಕೊರಿಯಾ: ಸಮುದ್ರದಾಳದಲ್ಲಿ ನ್ಯೂಕ್ಲಿಯರ್ ದಾಳಿ ಸಾಮರ್ಥ್ಯದ ಡ್ರೋನ್ ಪರೀಕ್ಷೆ

ಪಿಟಿಐ
Published 24 ಮಾರ್ಚ್ 2023, 11:12 IST
Last Updated 24 ಮಾರ್ಚ್ 2023, 11:12 IST
ಹೊಸತಾದ ಶಸ್ತ್ರಾಸ್ತ್ರ ಪರೀಕ್ಷೆಗಳು ನೆರೆಯ ರಾಷ್ಟ್ರಗಳಿಗೆ ಹಾನಿಯುಂಟುಮಾಡದು ಎಂದು ಉತ್ತರ ಕೊರಿಯಾ ತಿಳಿಸಿದೆ. ಚಿತ್ರದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
ಹೊಸತಾದ ಶಸ್ತ್ರಾಸ್ತ್ರ ಪರೀಕ್ಷೆಗಳು ನೆರೆಯ ರಾಷ್ಟ್ರಗಳಿಗೆ ಹಾನಿಯುಂಟುಮಾಡದು ಎಂದು ಉತ್ತರ ಕೊರಿಯಾ ತಿಳಿಸಿದೆ. ಚಿತ್ರದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್   

ಸೋಲ್ (ದಕ್ಷಿಣ ಕೊರಿಯಾ): ಪರಮಾಣು ದಾಳಿ ಸಂಘಟಿಸಬಲ್ಲ ‘ಜಲಾಂತರ್ಗಾಮಿ‘ ಡ್ರೋನ್‌ ಪರೀಕ್ಷೆಯನ್ನು ಉತ್ತರ ಕೊರಿಯಾ ನಡೆಸಿದೆ ಎಂದು ಇಲ್ಲಿನ ರಾಷ್ಟ್ರೀಯ ಮಾಧ್ಯಮ ಶುಕ್ರವಾರ ವರದಿ ಮಾಡಿದೆ. ಈ ಮೂಲಕ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಅಮೆರಿಕ– ದಕ್ಷಿಣ ಕೊರಿಯಾದ ಜಂಟಿ ಮಿಲಿಟರಿ ಸಮರಾಭ್ಯಾಸ ನಿಲ್ಲಿಸಬೇಕೆಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.

ಉತ್ತರ ಕೊರಿಯಾದ ಪಶ್ಚಿಮ ಭಾಗದಲ್ಲಿ ಜಲಾಂತರ್ಗಾಮಿ ಮೂಲಕ ನ್ಯೂಕ್ಲಿಯರ್ ಡ್ರೋನ್ ಅನ್ನು 80ರಿಂದ 150 ಮೀ.ನಷ್ಟು ಸಾಗರದ ಆಳಕ್ಕೆ ಕಳುಹಿಸಲಾಯಿತು. ಸುಮಾರು 59 ಗಂಟೆಗಳ ಕಾಲ ಈ ಪರೀಕ್ಷೆ ನಡೆಯಿತು ಎಂದು ಮಾಧ್ಯಮ ಪ್ರಕಟಿಸಿದೆ.

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ವಿಶ್ಲೇಷಕರೊಬ್ಬರು,‘ಉತ್ತರ ಕೊರಿಯಾ ನಡೆಸುತ್ತಿರುವ ವಿವಿಧ ರೀತಿಯ ನ್ಯೂಕ್ಲಿಯರ್ ಪರೀಕ್ಷೆಗಳು ಕೇವಲ ಪ್ರದರ್ಶನವಷ್ಟೇ. ಇದರಿಂದಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯಾಕ್ಕೆ ಒತ್ತಡ ಹೆಚ್ಚುತ್ತದೆಯೇ ಹೊರತು, ಈ ಜಲಾಂತರ್ಗಾಮಿ ನ್ಯೂಕ್ಲಿಯರ್ ಡ್ರೋನ್‌ನನ್ನು ಕಾರ್ಯಾಚರಣೆಗೆ ಉ.ಕೊರಿಯಾ ಬಳಸುವುದು ಸಂಶಯಾಸ್ಪದ‘ ಎಂದಿದ್ದಾರೆ.

ADVERTISEMENT

ಈ ಕುರಿತು ದ.ಕೊರಿಯಾದ ಸೇನಾ ಅಧಿಕಾರಿಯೊಬ್ಬರು ‘ಉ.ಕೊರಿಯಾ ನಡೆಸಿದೆ ಎನ್ನಲಾದ ಈ ಪರೀಕ್ಷೆಯ ಸತ್ಯಾಸತ್ಯತೆ ತಿಳಿಯಲಾಗುವುದು‘ ಎಂದು ಹೇಳಿದ್ದಾರೆ. ಜತೆಗೆ ಅಮೆರಿಕವು ‘ಈ ಜಲಾಂತರ್ಗಾಮಿ ನ್ಯೂಕ್ಲಿಯಾರ್ ಪರೀಕ್ಷೆ ನಡೆಸಿದ ಯಾವುದೇ ಕುರುಹು ಪತ್ತೆಯಾಗುತ್ತಿಲ್ಲ‘ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.