ADVERTISEMENT

ರೋಗ ನಿರೋಧಕ ಪದರದ ಹೊಸ ಮಾಸ್ಕ್‌ : ನಾರ್ತ್‌ ವೆಸ್ಟರ್ನ್‌ ವಿಜ್ಞಾನಿಗಳ ಪ್ರಯತ್ನ

ಅಮೆರಿಕದ ನಾರ್ತ್‌ ವೆಸ್ಟರ್ನ್‌ ವಿವಿಯ ವಿಜ್ಞಾನಿಗಳ ಪ್ರಯತ್ನ

ಪಿಟಿಐ
Published 30 ಅಕ್ಟೋಬರ್ 2020, 13:00 IST
Last Updated 30 ಅಕ್ಟೋಬರ್ 2020, 13:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಅಮೆರಿಕದ ನಾರ್ತ್‌ ವೆಸ್ಟರ್ನ್‌ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ರೋಗ ನಿರೋಧಕ ಪದರವನ್ನೊಳಗೊಂಡ ಮಾಸ್ಕ್‌ ವಿನ್ಯಾಸಗೊಳಿಸಿದ್ದಾರೆ.

ಮಾಸ್ಕ್ ತಯಾರಿಕೆಗೆ ರೋಗನಿರೋಧಕ ರಾಸಾಯನಿಕಗಳಿಂದ ತಯಾರಿಸಲಾದ ಬಟ್ಟೆಯನ್ನು ಬಳಸಿದ್ದಾರೆ. ನಾವು ಹೊರ ಬಿಡುವ ಉಸಿರು, ಸೀನಿನ ತುಣುಕುಗಳು ವಾತಾವರಣಕ್ಕೆ ಸೇರುವ ಮುನ್ನ ಸ್ಯಾನಿಟೈಸ್‌ ಆಗಬೇಕು ಎಂಬುದು ಈ ಬಟ್ಟೆ ಬಳಸಿರುವ ಹಿಂದಿನ ಉದ್ದೇಶ‘‍ ಎಂದು ಅಮೆರಿಕದ ನಾರ್ತ್‌ವೆಸ್ಟರ್ನ್‌ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

ಈ ಮಾಸ್ಕ್‌ ತಯಾರಿಸಲು ‘ಲಿಂಟ್‌ ಫ್ರೀ‘ (ಮೃದುವಾದ ಬಟ್ಟೆ) ಬಟ್ಟೆಯನ್ನು ಬಳಸಲಾಗಿದೆ. ಈ ಬಟ್ಟೆಯು ನಮ್ಮ ದೇಹದಿಂದ ಹೊರ ಹೋಗುವ ಉಸಿರನ್ನು ಶೇ 82 ರಷ್ಟು ಶುಚಿಗೊಳಿಸುತ್ತದೆ ಎಂದು ಜರ್ನಲ್‌ ಮ್ಯಾಟರ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳಿದೆ.

ADVERTISEMENT

‘ಇಂತಹ ಬಟ್ಟೆಗಳು ಉಸಿರಾಟಕ್ಕೆ ತೊಂದರೆ ಉಂಟು ಮಾಡುವುದಿಲ್ಲ. ಅಲ್ಲದೇ ಉಚ್ವಾಸ ವೇಳೆ (ಉಸಿರನ್ನು ಒಳಗೆ ತೆಗೆದುಕೊಳ್ಳವ) ಮಾಸ್ಕ್‌ ತಯಾರಿಕೆಗೆ ಬಳಸಿರುವ ರಾಸಯನಿಕಗಳು ದೇಹದೊಳಗೆ ಹೋಗುವುದಿಲ್ಲ. ಹೊಸದಾಗಿ ವಿನ್ಯಾಸಗೊಳಿಸಿದ ಮಾಸ್ಕ್‌ನ ಮೊದಲ ಪದರವನ್ನು ಪಾಲಿಮರ್ ಪಾಲಿಯಾನಿಲಿನ್‌ನಿಂದ ಸಿದ್ಧಪಡಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

‘ಕೊರೊನಾ ವಿರುದ್ಧ ಹೋರಾಡುವಲ್ಲಿ ಅಗತ್ಯವಿರುವವೈಯಕ್ತಿಕ ರಕ್ಷಣಾ ಸಾಧನಗಳಲ್ಲಿ (ಪಿಪಿಇ) ಮಾಸ್ಕ್‌ಗಳು ಬಹಳ ಪ್ರಮುಖವಾದವು. ಮಾಸ್ಕ್‌ ಧರಿಸುವವರಿಗೆ ಮಾತ್ರವಲ್ಲದೇ ಇನ್ನಿತರಿರಿಗೂ ಸೋಂಕಿನಿಂದ ರಕ್ಷಣೆ ನೀಡುತ್ತದೆ. ಮಾಸ್ಕ್‌ ಧರಿಸುವವರು ಹೊರ ಬಿಡುವ ಉಸಿರಿನಲ್ಲಿದ್ದ ವೈರಾಣು ಇತರರಿಗೆ ಸೇರದಂತೆಯೂ ಮುಖಗವಸು ನೋಡಿಕೊಳ್ಳುತ್ತದೆ’ ಎಂದು ನಾರ್ತ್‌ವೆಸ್ಟರ್ನ್‌ ವಿಶ್ವವಿದ್ಯಾಲಯದ ಸಂಶೋಧಕ ಚಾಯ್ಸಿಂಗ್‌ ಹುವಾ ತಿಳಿಸಿದ್ದಾರೆ.

‘ಮಾಸ್ಕ್‌ಗಳು ವೈರಸ್‌ ನಮ್ಮ ದೇಹ ಸೇರುವುದನ್ನು ತಡೆಯುತ್ತಾದರೂ, ಸಂಪೂರ್ಣ ರಕ್ಷಣೆ ನೀಡುವುದಿಲ್ಲ. ಮಾಸ್ಕ್‌ ಧರಿಸಿದ್ದರೂ ವೈರಸ್‌ಗಳು ನಮ್ಮ ದೇಹದೊಳಗೆ ಸೇರುವ ಸಾಧ್ಯತೆ ಇದೆ. ಇಂತಹ ಸಮಯದಲ್ಲಿ ರೋಗ ನಿರೋಧಕ ಪದರಗಳನ್ನು ಒಳಗೊಂಡ ಇಂಥ ಮುಖಗವಸುಗಳು ಪ್ರಯೋಜನಕಾರಿಯಾಗಿವೆ’ ಎಂದು ಸಂಶೋಧಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.