ADVERTISEMENT

ಮಾನವೀಯತೆಗೆ ದೊಡ್ಡ ಅಪಾಯ: ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗೆ ಟ್ರಂಪ್ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 16:08 IST
Last Updated 31 ಅಕ್ಟೋಬರ್ 2025, 16:08 IST
ಕ್ಯಾಲಿಫೋರ್ನಿಯಾದಲ್ಲಿರುವ ವಂಡನ್‌ಬರ್ಗ್‌ ವಾಯುನೆಲೆಯಲ್ಲಿ 2020ರ ಫೆಬ್ರುವರಿ 5ರಂದು ಅಮೆರಿಕ ಸೇನೆಯು ಖಂಡಾಂತರ ಕ್ಷಿಪಣಿಯ ಪರೀಕ್ಷೆ ನಡೆಸಿತ್ತು
ಕ್ಯಾಲಿಫೋರ್ನಿಯಾದಲ್ಲಿರುವ ವಂಡನ್‌ಬರ್ಗ್‌ ವಾಯುನೆಲೆಯಲ್ಲಿ 2020ರ ಫೆಬ್ರುವರಿ 5ರಂದು ಅಮೆರಿಕ ಸೇನೆಯು ಖಂಡಾಂತರ ಕ್ಷಿಪಣಿಯ ಪರೀಕ್ಷೆ ನಡೆಸಿತ್ತು   

ಮೆಲ್ಬರ್ನ್‌: ಇತರೆ ರಾಷ್ಟ್ರಗಳ ಸಮಾನ ಆಧಾರದ ಮೇಲೆ ದೇಶದಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ತಕ್ಷಣವೇ ಆರಂಭಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ ‘ಪೆಂಟಗಾನ್‌’ಗೆ ಸೂಚನೆ ನೀಡಿದ್ದಾರೆ.

ಟ್ರಂಪ್‌ ಅವರು ಪರಮಾಣು ಸ್ಫೋಟ ಪರೀಕ್ಷೆ ಕುರಿತು ಉಲ್ಲೇಖಿಸಿದ್ದರೆ, ಅದು ಅಮೆರಿಕದ ಪಾಲಿಗೆ ದುರದೃಷ್ಟಕರ ಹಾಗೂ ವಿಷಾದನೀಯ ಹೆಜ್ಜೆಯಾಗಿರಲಿದೆ ಎಂದು ವಿಶ್ಲೇಷಿಸಲಾಗಿದೆ. ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ರಾಷ್ಟ್ರಗಳು ಪ್ರತೀಕಾರದ ಘೋಷಣೆಗಳು ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ರಷ್ಯಾ– ಚೀನಾವು ಅತ್ಯಂತ ವೇಗದಲ್ಲಿ ಶಸ್ತ್ರಾಸ್ತ್ರಗಳ ವೃದ್ಧಿಯಲ್ಲಿ ತೊಡಗಿದೆ. ಇದರ ಬೆನ್ನಲ್ಲೇ, ಟ್ರಂಪ್ ಸೂಚನೆಯು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ.

ಪರೀಕ್ಷೆಯಿಂದ ಜಾಗತಿಕ ಮಟ್ಟದಲ್ಲಿ ವಿಕಿರಣಶೀಲದ ಆಳವಾದ ಅಪಾಯದ ಕುರಿತು ಆತಂಕ ಎದುರಾಗಿದೆ. ಒಂದೊಮ್ಮೆ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ನೆಲದಾಳದಲ್ಲಿ ನಡೆಸಿದರೆ, ಅದರಿಂದ ಹೊರಹೊಮ್ಮುವ ವಿಕಿರಣಶೀಲ ವಸ್ತುಗಳ ಬಿಡುಗಡೆಯಿಂದ ಜನಜೀವನದ ಮೇಲೆ ಪರಿಣಾಮ ಉಂಟು ಮಾಡಲಿದ್ದು, ಅಂತರ್ಜಲಕ್ಕೆ ಸೇರುವ ಸಾಧ್ಯತೆಯಿದೆ. 

ADVERTISEMENT

ಸಮಗ್ರ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದಕ್ಕೆ 187 ದೇಶಗಳು ಸಹಿಹಾಕಿವೆ. ಇದು ಜಾಗತಿಕ ವಲಯದಲ್ಲಿ ನಿಶ್ಯಸ್ತ್ರೀಕರಣವನ್ನು ಬೆಂಬಲಿಸಿ ನಡೆದ ಒಪ್ಪಂದವಾಗಿದೆ. ಅಮೆರಿಕವೂ ಕೂಡ ಈ ಒಪ್ಪಂದಕ್ಕೆ ಸಹಿಹಾಕಿದೆ. ಆದರೆ, ಅದನ್ನು ಇದುವರೆಗೂ ಅನುಮೋದಿಸಿಲ್ಲ.

ಜಾಗತಿಕ ಮಟ್ಟದಲ್ಲಿ ಪರಮಾಣು ಶಸ್ತ್ರಾಸ್ತ್ರ ಹೊಂದಿರುವ(ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್‌, ಬ್ರಿಟನ್‌, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಹಾಗೂ ಇಸ್ರೇಲ್‌) ದೊಡ್ಡ ಪ್ರಮಾಣದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಹೂಡಿಕೆ ಮಾಡುತ್ತಿದ್ದು, ನಿಖರ, ದೀರ್ಘ ಶ್ರೇಣಿಯ, ಹೆಚ್ಚು ವೇಗದ ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಒತ್ತು ನೀಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.