ADVERTISEMENT

ತಾಲಿಬಾನಿಗಳ ಐದು ವೆಬ್‌ಸೈಟ್‌ಗಳು ದಿಢೀರ್‌ ಸ್ತಬ್ಧ: ಕಾರಣ ನಿಗೂಢ

ಏಜೆನ್ಸೀಸ್
Published 21 ಆಗಸ್ಟ್ 2021, 4:05 IST
Last Updated 21 ಆಗಸ್ಟ್ 2021, 4:05 IST
   

ಕಾಬೂಲ್‌: ಅಫ್ಗಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ತಾಲಿಬಾನಿ ಉಗ್ರರ ಅಧಿಕೃತ ಸಂದೇಶಗಳನ್ನು ಬಿತ್ತರಿಸುತ್ತಿದ್ದ, ಐದು ಭಾಷೆಗಳ ವೆಬ್‌ಸೈಟ್‌ಗಳು ಶುಕ್ರವಾರ ಹಠಾತ್ತನೆ ಸ್ತಬ್ಧಗೊಂಡಿವೆ. ಅವುಗಳನ್ನು ಉದ್ದೇಶಪೂರ್ವಕಾಗಿಯೇ ನಿರ್ಬಂಧಿಸಿರುವ, ಅಥವಾ ಸೀಮಿತಗೊಳಿಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಪಾಷ್ತೊ, ಉರ್ದು, ಅರೇಬಿಕ್, ಇಂಗ್ಲೀಷ್‌ ಮತ್ತು ದರಿ ಭಾಷೆಗಳಲ್ಲಿನ ವೆಬ್‌ಸೈಟ್‌ಗಳು ಹಠಾತ್ತನೇ ಯಾಕೆ ಸ್ತಬ್ಧಗೊಂಡವು ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಈ ವೆಬ್‌ಸೈಟ್‌ಗಳನ್ನು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕ್ಲೌಡ್‌ಫ್ಲೇರ್ ನಿರ್ವಹಣೆ ಮಾಡುತ್ತಿತ್ತು. ಆದರೆ, ವೆಬ್‌ಸೈಟ್‌ಗಳು ಏಕೆ ಸ್ತಬ್ಧಗೊಂಡಿವೆ ಎಂಬುದರ ಬಗ್ಗೆ ಕ್ಲೌಡ್‌ಫ್ಲೇರ್‌ ಪ್ರತಿಕ್ರಿಯಿಸಿಲ್ಲ.

ಇಮೇಲ್‌ಗಳು ಮತ್ತು ಫೋನ್ ಕರೆಗಳಿಗೂ ಕ್ಲೌಡ್‌ಫ್ಲೇರ್‌ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ. ಈಗಲೂ ಈ ಸಂಸ್ಥೆಯೇ ತಾಲಿಬಾನ್‌ನ ವೆಬ್‌ಸೈಟ್‌ಗಳನ್ನು ನಿರ್ವಹಿಸುತ್ತಿದೆಯೇ ಎಂಬುದೂ ಸ್ಪಷ್ಟವಾಗಿಲ್ಲ.

ADVERTISEMENT

ತಾಲಿಬಾನ್ ಬಳಸುವ ಹಲವಾರು ವಾಟ್ಸ್‌ಆ್ಯಪ್‌ ಗ್ರೂಪ್‌ಗಳೂ ಶುಕ್ರವಾರ ಸ್ಥಗಿತಗೊಂಡಿವೆ ಎಂದು ಆನ್‌ಲೈನ್ ಉಗ್ರವಾದದ ಮೇಲೆ ನಿಗಾ ವಹಿಸುವ ‘ಸೈಟ್‌ ಇಂಟೆಲಿಜೆನ್ಸ್ ಗ್ರೂಪ್’ನ ನಿರ್ದೇಶಕಿ ರೀಟಾ ಕಾಟ್ಜ್‌ ಹೇಳಿದ್ದಾರೆ. ತಾಲಿಬಾನಿಗಳ ವಾಟ್ಸ್‌ಆ್ಯಪ್‌ ಖಾತೆಗಳೂ ನಿಷೇಧಕ್ಕೊಳಗಾಗಿರುವುದಾಗಿ ಅವರು ತಿಳಿಸಿದ್ದಾರೆ.

ವಾಟ್ಸ್‌ಆ್ಯಪ್‌ನ ವಕ್ತಾರ ಡೇನಿಯೆಲ್ ಈ ನಿಷೇಧವನ್ನು ದೃಢೀಕರಿಸಲಿಲ್ಲ. ಆದರೆ, ಅಮೆರಿಕ ರೂಪಿಸಿರುವ ನಿರ್ಬಂಧಕ ಕಾನೂನುಗಳನ್ನು ಅನುಸರಿಸಲು ತಾವು ಬದ್ಧವಿರುವುದಾಗಿ ವಾಟ್ಸ್‌ಆ್ಯಪ್‌ ಹೇಳಿದೆ. ಈ ಕಾನೂನಿನಲ್ಲಿ ತಾಲಿಬಾನ್‌ನ ಅಧಿಕೃತ ಖಾತೆಗಳನ್ನು ನಿಷೇಧಿಸುವುದನ್ನು ಉಲ್ಲೇಖಿಸಲಾಗಿದೆ.

ತಾಲಿಬಾನ್ ವೆಬ್‌ಸೈಟ್‌ಗಳನ್ನು ಸ್ತಬ್ದಗೊಳಿಸಿರುವುದು ಅದರ ಆನ್‌ಲೈನ್ ಉಪಸ್ಥಿತಿಯನ್ನು ಸೀಮಿತಗೊಳಿಸುವ, ನಿರ್ಬಂಧಿಸುವ ಮೊದಲ ಹೆಜ್ಜೆ ಇರಬಹುದು ಎಂದು ನಾನು ಭಾವಿಸಿದ್ದೇನೆ ಎಂದು ಕಾಟ್ಜ್ ಇಮೇಲ್ ಮೂಲಕ ತಿಳಿಸಿದ್ದಾರೆ.

20 ವರ್ಷಗಳ ಹಿಂದಿನ ತಾಲಿಬಾನ್‌ಗಿಂತಲೂ ಈಗಿನ ತಾಲಿಬಾನ್‌ ತಂತ್ರಜ್ಞಾನದ ದೃಷ್ಟಿಯಿಂದ ವಿಭಿನ್ನವಾಗಿದೆ. ಇಂದಿನ ತಾಲಿಬಾನಿಗಳು ಅಪಾರವಾದ ತಂತ್ರಜ್ಞಾನ, ಮಾಧ್ಯಮ ಪ್ರಜ್ಞೆ ಹೊಂದಿದ್ದಾರೆ. ಅವರ ಆನ್‌ಲೈನ್ ವ್ಯವಸ್ಥೆಯು ಅಲ್-ಕೈದಾ ಮತ್ತು ಇತರ ಉಗ್ರ ಇಸ್ಲಾಮಿಕ್‌ ಬಣಗಳನ್ನು ಪ್ರೇರೇಪಿಸುವ ಮತ್ತು ಸಜ್ಜುಗೊಳಿಸು ಸಾಮರ್ಥ್ಯ ಹೊಂದಿವೆ ಎಂದು ಕಾಟ್ಜ್ ಹೇಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.