ADVERTISEMENT

ಉತ್ತರ ನೈಜೀರಿಯಾದಲ್ಲಿನ ಮಸೀದಿ ಮೇಲೆ ಗುಂಡಿನ ದಾಳಿ: 18 ಸಾವು

ಏಜೆನ್ಸೀಸ್
Published 26 ಅಕ್ಟೋಬರ್ 2021, 6:51 IST
Last Updated 26 ಅಕ್ಟೋಬರ್ 2021, 6:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಾಗೋಸ್‌ (ನೈಜೀರಿಯ): ಉತ್ತರ ನೈಜೀರಿಯಾದ ಮಸೀದಿಯೊಂದರಲ್ಲಿ ಸೋಮವಾರ ಮುಂಜಾನೆ ಪ್ರಾರ್ಥನೆ ಸಲ್ಲಿಸುವ ವೇಳೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರು ತಿಳಿಸಿದ್ದಾರೆ.

ನೈಜರ್ ರಾಜ್ಯದ ಮಶೆಗು ಸ್ಥಳೀಯ ಆಡಳಿತ ಪ್ರದೇಶ ವ್ಯಾಪ್ತಿಯಲ್ಲಿರುವ ಮಜಕುಕಾ ಗ್ರಾಮದಲ್ಲಿರುವ ಮಸೀದಿ ಮೇಲೆ ಈ ದಾಳಿ ನಡೆದಿದೆ. ದಾಳಿ ನಡೆಸಿದವರನ್ನು ಜನಾಂಗೀಯ ಫುಲಾನಿ ಅಲೆಮಾರಿ ಕುರಿಗಾಹಿಗಳು ಎಂದು ಶಂಕಿಸಲಾಗಿದೆ. ಹಂತಕರು ಪರಾರಿಯಾಗಿದ್ದಾರೆ.

‘ಬಂದೂಕುಧಾರಿಗಳು ಮಸೀದಿಯ ಸುತ್ತಲೂ ಸುತ್ತುವರಿದು, ಗುಂಡು ಹಾರಿಸಲು ಪ್ರಾರಂಭಿಸಿದರು‘ ಎಂದು ಮಶೆಗು ಸ್ಥಳೀಯ ಆಡಳಿತ ಪ್ರದೇಶದ ಅಧ್ಯಕ್ಷ ಅಲ್ಹಾಸನ್ ಇಸಾ ಸುದ್ದಿ ಸಂಸ್ಥೆಗೆ ತಿಳಿಸಿದರು. ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

ADVERTISEMENT

ನೈಜರ್ ರಾಜ್ಯದ ಪೊಲೀಸ್ ಆಯುಕ್ತ ಕುರ್ಯಾಸ್‌, ‘ಮಜುಕುಕಾ ಗ್ರಾಮಸ್ಥರು ಮತ್ತು ಫುಲಾನಿ ಮುಖಂಡರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ‘ ಎಂದು ಹೇಳಿದ್ದಾರೆ.

ಈ ವರ್ಷ ನಡೆದಿರುವ ಇಂಥ ಹಲವು ಜನಾಂಗೀಯ ಹಿಂಸಾಚಾರದಿಂದ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ನೆಲ–ಜಲ ಬಳಕೆಯ ವಿಚಾರಕ್ಕಾಗಿ ದಶಕಗಳಿಂದ ನಡೆಯುತ್ತಿರುವ ಈ ಸಂಘರ್ಷಗಳು, ಈಗ ಜನಾಂಗೀಯ ಹಿಂಸಾಚಾರ ರೂಪ ಪಡೆದುಕೊಂಡಿವೆ. ಆ ಸಂಘರ್ಷದಲ್ಲಿ ಸಿಲುಕಿರುವ ಫುಲಾನಿಗಳಲ್ಲಿ ಕೆಲವರು ಸ್ಥಳೀಯ ಹೌಸಾ ಕೃಷಿ ಸಮುದಾಯಗಳ ವಿರುದ್ಧ ಶಸ್ತ್ರಾಸ್ತ್ರ ಹೋರಾಟಕ್ಕೆ ಇಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.