ADVERTISEMENT

ದಾನಿಯ ವೀರ್ಯದಲ್ಲಿ ಕ್ಯಾನ್ಸರ್‌ಕಾರಕ ವಂಶವಾಹಿ ಪತ್ತೆ: 200 ಮಕ್ಕಳಲ್ಲಿ ಆತಂಕ

ವೀರ್ಯದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ವಂಶವಾಹಿ ರೂಪಾಂತರ ಪತ್ತೆ

ಪಿಟಿಐ
Published 15 ಡಿಸೆಂಬರ್ 2025, 15:41 IST
Last Updated 15 ಡಿಸೆಂಬರ್ 2025, 15:41 IST
.
.   

ಲೈಸೆಸ್ಟರ್ (ಬ್ರಿಟನ್): ಒಬ್ಬನೇ ವ್ಯಕ್ತಿ ದಾನವಾಗಿ ನೀಡಿದ್ದ ವೀರ್ಯದಿಂದ ಹಲವು ದೇಶಗಳಲ್ಲಿ ಸುಮಾರು 200 ಮಕ್ಕಳು ಜನಿಸಿವೆ. ಆದರೆ ದಾನಿಯ ವೀರ್ಯದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕ್ಯಾನ್ಸರ್‌ಗೆ ಕಾರಣವಾಗುವ ಅಪರೂಪದ ವಂಶವಾಹಿ ರೂಪಾಂತರ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. 

ದಾನಿಯು ಡೆನ್ಮಾರ್ಕ್‌ನ ‘ಯುರೋಪಿಯನ್‌ ಸ್ಪರ್ಮ್‌ ಬ್ಯಾಂಕ್‌’ಗೆ ಸುಮಾರು 17 ವರ್ಷಗಳ ಹಿಂದೆ ವೀರ್ಯವನ್ನು ನೀಡಿದ್ದರು. ವೀರ್ಯದಾನದಿಂದ ಹುಟ್ಟಿದ ಹಲವು ಮಕ್ಕಳು ಈಗಾಗಲೇ ಮೃತಪಟ್ಟಿವೆ ಮತ್ತು ಯುರೋಪ್‌ನಾದ್ಯಂತ ಹಲವು ಕುಟುಂಬಗಳನ್ನು ಅಪಾಯಕ್ಕೆ ದೂಡಿದೆ. 

ಒಬ್ಬ ವ್ಯಕ್ತಿ ಇಷ್ಟು ಜನರಿಗೆ ವೀರ್ಯವನ್ನು ನೀಡಲು ಹೇಗೆ ಸಾಧ್ಯ? ತಪಾಸಣೆ ವೇಳೆ ವಂಶವಾಹಿ ರೂಪಾಂತರವನ್ನು ಗುರುತಿಸುವಲ್ಲಿ ವಿಫಲವಾಗಿದ್ದು ಏಕೆ ಎಂಬ ಪ್ರಶ್ನೆಗಳನ್ನು ಈ ಪ್ರಕರಣವು ಹುಟ್ಟುಹಾಕಿದೆ.

ADVERTISEMENT

ಹಲವು ಹಂತದ ಪರೀಕ್ಷೆ:

ವೀರ್ಯ ಪಡೆಯುವ ಮೊದಲು ಹಲವು ಹಂತಗಳಲ್ಲಿ ವ್ಯಕ್ತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಈ ಪ್ರಕ್ರಿಯೆಯು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ. ಇದಕ್ಕೆ ತನ್ನದೇ ಆದ ಮಿತಿಗಳೂ ಇವೆ.

ವೈದ್ಯಕೀಯ ತಪಾಸಣೆಯು ಕುಟುಂಬದ ನಿಖರ ಇತಿಹಾಸವನ್ನು ಅವಲಂಬಿಸಿರುತ್ತದೆ. ಆದರೆ, ಹಲವರು ತಮ್ಮ ಸಂಬಂಧಿಕರ ಕುರಿತ ಅಪೂರ್ಣ ಮಾಹಿತಿಯನ್ನು ಹೊಂದಿರುತ್ತಾರೆ. ಕೆಲವೊಮ್ಮೆ ವಯಸ್ಕ ದಾನಿಯು ಆರೋಗ್ಯವಂತನಾಗಿರಬಹುದು. ಆದರೆ, ನಂತರದಲ್ಲಿ ಆತನಲ್ಲಿ ಕಾಯಿಲೆ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ದಾನಿಯ ಮತ್ತು ಅವರ ಕುಟುಂಬದ ಆರೋಗ್ಯ ಇತಿಹಾಸದ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವರು ನೀಡಿದ ಮಾಹಿತಿಯಲ್ಲಿ ಆನುವಂಶಿಕ ಅಪಾಯಗಳು ಇರುವ ಸುಳಿವು ಲಭ್ಯವಾದಲ್ಲಿ ದಾನಿಯನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅದು ಸಾಬೀತಾದ ಬಳಿಕ ಅವರಿಂದ ದಾನ ಪಡೆಯಲು ನಿರಾಕರಿಸಲಾಗುತ್ತದೆ.

ವಿತರಣೆಗೆ ಮಿತಿ ಇಲ್ಲ:

ಅಂತರರಾಷ್ಟ್ರೀಯ ಕಾನೂನಿನಲ್ಲಿ ಒಬ್ಬ ವ್ಯಕ್ತಿಯ ವೀರ್ಯವನ್ನು ಎಷ್ಟು ಮಂದಿಗೆ ನೀಡಬೇಕು ಎಂಬುದಕ್ಕೆ ಮಿತಿ ನಿಗದಿಪಡಿಸಿಲ್ಲ. ಇದೇ ಕಾರಣದಿಂದ ಇಷ್ಟೊಂದು ದೊಡ್ಡ ಸಂಖ್ಯೆಯ ಮಕ್ಕಳ ಮೇಲೆ ಕಾಯಿಲೆಯ ಕರಿನೆರಳು ಬಿದ್ದಿದೆ. ಆದರೆ, ಕೆಲವು ದೇಶಗಳು ವೀರ್ಯ ವಿತರಣೆಗೆ ಮಿತಿ ನಿಗದಿಪಡಿಸಿವೆ. 

ಬ್ರಿಟನ್‌ನಲ್ಲಿ ಒಬ್ಬ ವ್ಯಕ್ತಿಯ ವೀರ್ಯವನ್ನು ಕೇವಲ 10 ಕುಟುಂಬಗಳಿಗೆ ನೀಡಬಹುದು. ಆದರೆ, ಈ ಮಿತಿ ದೇಶದ ಒಳಗೆ ಮಾತ್ರ ಅನ್ವಯವಾಗುತ್ತದೆ. ಹೀಗಾಗಿ ದಾನಿಯ ವೀರ್ಯವನ್ನು ಬೇರೆ ಬೇರೆ ದೇಶಗಳಲ್ಲಿ ಬಳಕೆ ಮಾಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.