
ಒಸ್ಮಾನ್ ಹಾದಿ
ಢಾಕಾ: ಬಾಂಗ್ಲಾದೇಶದಲ್ಲಿ ಹತ್ಯೆಯಾದ ವಿದ್ಯಾರ್ಥಿ ನಾಯಕ ಒಸ್ಮಾನ್ ಹಾದಿ ಅವರ ಅಣ್ಣನನ್ನು ಬ್ರಿಟನ್‌ನ ಬಾಂಗ್ಲಾದೇಶದ ರಾಜತಾಂತ್ರಿಕ ಮಿಷನ್‌ನ 2ನೇ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಇನ್‌ಕ್ವಿಲಾಬ್ ಮೊಂಚೊ ಸಂಘಟನೆ ವಕ್ತಾರರಾಗಿದ್ದ 32 ವರ್ಷದ ಒಸ್ಮಾನ್ ಅವರನ್ನು ಡಿಸೆಂಬರ್ 12ರಂದು ಢಾಕಾದಲ್ಲಿ ಚುನಾವಣಾ ಪ್ರಚಾರದ ವೇಳೆ ತಲೆಗೆ ಗುಂಡಿಕ್ಕಲಾಗಿತ್ತು. ಉನ್ನತ ಚಿಕಿತ್ಸೆಗಾಗಿ ವಿಮಾನದ ಮೂಲಕ ಸಿಂಗಪುರಕ್ಕೆ ಕರೆದೊಯ್ಯಲಾಗಿತ್ತು. 6 ದಿನಗಳ ಬಳಿಕ ಆತ ಮೃತಪಟ್ಟಿದ್ದ.
ಒಸ್ಮಾನ್ ಹತ್ಯೆ ಬಳಿಕ ಢಾಕಾದಲ್ಲಿ ಪ್ರತಿಭಟನೆಗಳು, ಗುಂಪು ಘರ್ಷಣೆ ನಡೆದವು. ಪ್ರಸಿದ್ಧ ದಿನಪತ್ರಿಕೆಗಳು ಮತ್ತು ಪ್ರಗತಿಪರ ಸಾಂಸ್ಕೃತಿಕ ಸಂಘಟನೆಗಳ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿತ್ತು.
ಒಸ್ಮಾನ್ ಹಾದಿಯ ಅಣ್ಣ ಒಮರ್ ಬಿನ್ ಹಾದಿಯವರನ್ನು ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಬಾಂಗ್ಲಾದೇಶದ ಸಹಾಯಕ ಹೈಕಮಿಷನ್‌ನ ಎರಡನೇ ಕಾರ್ಯದರ್ಶಿಯಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ ಎಂದು ಡೈಲಿ ಸ್ಟಾರ್ ದಿನಪತ್ರಿಕೆ ವರದಿಮಾಡಿದೆ.
ಒಮರ್ ಅವಧಿಯು ನೇಮಕದ ದಿನದಿಂದ ಮೂರು ವರ್ಷಗಳವರೆಗೆ ಇರುತ್ತದೆ.
'ಯಾವುದೇ ಹುದ್ದೆ, ಉದ್ಯಮ, ಖಾಸಗಿ ಸಂಘಟನೆ, ಸರ್ಕಾರದೊಂದಿಗೆ ವೃತ್ತಿಪರ ನಂಟು ಕಡಿದುಕೊಳ್ಳುವ ಷರತ್ತಿನ ಮೇಲೆ ಈ ನೇಮಕಾತಿ ಮಾಡಲಾಗಿದೆ. ನೇಮಕಾತಿಯ ಇತರ ನಿಯಮಗಳನ್ನು ಒಪ್ಪಂದದಿಂದ ನಿರ್ಧರಿಸಲಾಗುತ್ತದೆ'ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.