ಲಿನ್ ಜಿಯಾನ್
ಬೀಜಿಂಗ್: ‘ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಉಭಯ ರಾಷ್ಟ್ರಗಳು ಸಂಯಮದಿಂದ ವರ್ತಿಸಬೇಕು. ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಸಕಾರಾತ್ಮಕ ಪಾತ್ರ ವಹಿಸಲು ಸಿದ್ಧ’ ಎಂದು ಚೀನಾ ಬುಧವಾರ ಹೇಳಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಇಂದು (ಬುಧವಾರ) ಮುಂಜಾನೆ ಭಾರತೀಯ ಸೇನೆಯು ನಡೆಸಿದ ಕ್ಷಿಪಣಿ ದಾಳಿಯ ನಂತರ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಪ್ರತಿಕ್ರಿಯಿಸಿದ್ದಾರೆ.
‘ಸದ್ಯದ ಪರಿಸ್ಥಿತಿಯ ಬಗ್ಗೆ ಚೀನಾ ಕಳವಳ ಹೊಂದಿದೆ. ಭಾರತ ಮತ್ತು ಪಾಕಿಸ್ತಾನಗಳು ಪರಸ್ಪರ ನೆರೆಯ ರಾಷ್ಟ್ರಗಳಾಗಿವೆ. ಜತೆಗೆ ಚೀನಾದೊಂದಿಗೂ ಈ ಎರಡೂ ರಾಷ್ಟ್ರಗಳು ಗಡಿಗಳನ್ನು ಹಂಚಿಕೊಂಡಿವೆ. ಎಲ್ಲಾ ಬಗೆಯ ಭಯೋತ್ಪಾದನೆಯನ್ನು ಚೀನಾ ವಿರೋಧಿಸುತ್ತದೆ. ಹೀಗಾಗಿ ಉಭಯ ರಾಷ್ಟ್ರಗಳು ಶಾಂತಿ ಮತ್ತು ಸ್ಥಿರತೆಗೆ ಒತ್ತು ನೀಡಬೇಕು. ಯಾವುದೇ ಪ್ರತೀಕಾರದ ಕ್ರಮವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಅಪಾಯವಿದೆ’ ಎಂದಿದ್ದಾರೆ.
‘ಉಭಯ ರಾಷ್ಟ್ರಗಳ ನಡುವಿನ ಸದ್ಯದ ಪರಿಸ್ಥಿತಿಯನ್ನು ಅಂತರರಾಷ್ಟ್ರೀಯ ಸಮುದಾಯವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತ ಮತ್ತು ಪಾಕಿಸ್ತಾನವೂ ಪರಿಸ್ಥಿತಿ ಇನ್ನಷ್ಟು ವಿಷಮ ಸ್ಥಿತಿಗೆ ಹೋಗುವುದನ್ನು ಇಷ್ಟಪಡುತ್ತಿಲ್ಲ ಎಂಬುದೂ ನಮ್ಮ ಗಮನಕ್ಕಿದೆ. ಹೀಗಾಗಿ ಎರಡೂ ರಾಷ್ಟ್ರಗಳು ಪರಿಸ್ಥಿತಿಯನ್ನು ತಿಳಿಗೊಳಿಸುತ್ತವೆ ಎಂಬ ವಿಶ್ವಾಸವಿದೆ. ಯಾವುದೇ ವಿವಾದವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯ’ ಎಂದಿದ್ದಾರೆ.
ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರಿ ಝಿಯಾಂಗ್ ಝಿಯಾಡಾಂಗ್ ಅವರು ಉಪ ಪ್ರಧಾನಿ ಇಷಾಕ್ ದಾರ್ ಅವರನ್ನು ಬುಧವಾರ ಬೆಳಿಗ್ಗೆ ಭೇಟಿಯಾಗಿ ಸದ್ಯದ ಪರಿಸ್ಥಿತಿ ಕುರಿತು ಚರ್ಚಿಸಿದರು.
2ನೇ ವಿಶ್ವ ಯುದ್ಧದಲ್ಲಿ ಸೋವಿಯತ್ ಒಕ್ಕೂಟದ ಗೆಲುವಿನ 80ನೇ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲು ಚೀನಾದ ಅಧ್ಯಕ್ಷ ಷಿ ಜಿಂಗ್‌ಪಿಂಗ್ ಅವರು ತೆರಳುವ ಸಂದರ್ಭದಲ್ಲೇ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಈ ಭೇಟಿಯಲ್ಲಿ ಷಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.