ಕಾಶ್ಮೀರದ ರಿಯಾಸಿ ಜಿಲ್ಲೆಯ ಕಟ್ರಾ ಬಳಿ ಚೆನಾಬ್ ನದಿಗೆ ನಿರ್ಮಿಸಿರುವ, ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆ ಉದ್ಘಾಟಿಸಿದ ನಂತರ ರಾಷ್ಟ್ರಧ್ವಜ ಹಿಡಿದು ಸಾಗಿದ ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಸ್ಲಾಮಾಬಾದ್ ಭಾಗಿಯಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಿಂದ ಹತಾಶಗೊಂಡಿರುವುದಾಗಿ ಪಾಕಿಸ್ತಾನ ಶುಕ್ರವಾರ ಹೇಳಿದೆ.
ಏಪ್ರಿಲ್ 22ರಂದು ನಡೆದ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು.
ಪಾಕಿಸ್ತಾನವು ಪಹಲ್ಗಾಮ್ ದಾಳಿಯು ಮೂಲಕ ಕಾಶ್ಮೀರ ಮತ್ತು ಮಾನವೀಯತೆ ಮೇಲೆ ದಾಳಿ ಮಾಡಿದೆ ಎಂದು ಮೋದಿ ಶುಕ್ರವಾರ ಆರೋಪಿಸಿದ್ದರು.
ಕಾಶ್ಮೀರ ಕಣಿವೆಯಲ್ಲಿ ಮೊದಲ ರೈಲು ಸೇವೆಗೆ ಶುಕ್ರವಾರ ಚಾಲನೆ ನೀಡಿದ್ದ ಪ್ರಧಾನಿ, ರಿಯಾಸಿ ಜಿಲ್ಲೆಯ ಕಟ್ರಾದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದರು. 'ನಮ್ಮ ನೆರೆಯ ರಾಷ್ಟ್ರವು ಮಾನವೀಯತೆ, ಸಾಮಾಜಿಕ ಸೌಹಾರ್ದತೆ ಮತ್ತು ಆರ್ಥಿಕ ಪ್ರಗತಿಯ ವಿರುದ್ಧ ನಿಂತಿದೆ' ಎಂದು ದೂರಿದ್ದರು.
'ಅದಷ್ಟೇ ಅಲ್ಲ. (ಪಾಕಿಸ್ತಾನ) ಬಡವರ ಅನ್ನದ ಶತ್ರುವೂ ಹೌದು' ಎಂದು ಕಿಡಿಕಾರಿದ್ದ ಮೋದಿ, 'ಭಾರತದಲ್ಲಿ ಕೋಮು ಸಂಘರ್ಷವನ್ನು ಪ್ರಚೋದಿಸಲು ಹಾಗೂ ಶ್ರಮಶೀಲ ಕಾಶ್ಮೀರಿಗಳ ಗಳಿಕೆಯನ್ನು ಕುಗ್ಗಿಸಲು ಪಾಕಿಸ್ತಾನ ಉದ್ದೇಶಿಸಿದೆ ಎಂಬುದಕ್ಕೆ ಪಹಲ್ಗಾಮ್ ದಾಳಿ ಸ್ಪಷ್ಟ ಉದಾಹರಣೆಯಾಗಿದೆ' ಎಂದು ಪುನರುಚ್ಚರಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಆಧಾರರಹಿತ ಹಾಗೂ ದಿಕ್ಕು ತಪ್ಪಿಸುವಂತಹ ಆರೋಪಗಳನ್ನು ಸ್ಪಷ್ಟವಾಗಿ ಅಲ್ಲಗಳೆಯುವುದಾಗಿ ಹೇಳಿದೆ.
'ಒಂದೇ ಒಂದು ವಿಶ್ವಾಸಾರ್ಹ ಪುರಾವೆಯನ್ನೂ ನೀಡದೆ, ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬುದಾಗಿ ಭಾರತದ ಪ್ರಧಾನಿ ಮತ್ತೊಮ್ಮೆ ಆರೋಪಿಸಿರುವುದು ಹತಾಶೆ ಮೂಡಿಸಿದೆ' ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಪಹಲ್ಗಾಮ್ ದಾಳಿ ನಡೆದ ಎರಡು ವಾರಗಳ ಬಳಿಕ, ಭಾರತೀಯ ಸೇನಾ ಪಡೆಗಳು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನಾ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು ದಾಳಿ ನಡೆಸಿದ್ದವು. ಇದರ ಬೆನ್ನಲ್ಲೇ, ಪಾಕ್ ಪಡೆಗಳು ಗಡಿಯುದ್ದಕ್ಕೂ ಭಾರತದ ವಿರುದ್ಧ ದಾಳಿ ಮಾಡಿದ್ದವು.
ಈ ವೇಳೆ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಸ್ಥಿತಿ ನಿರ್ಮಾನವಾಗಿತ್ತು. ಮೇ 10ರಂದು ಕದನ ವಿರಾಮ ಒಪ್ಪಂದಕ್ಕೆ ಬರಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.