120 ಕಿ.ಮೀ ಸಾಮರ್ಥ್ಯದ ನೆಲ ಕ್ಷಿಪಣಿ ಪರೀಕ್ಷೆ ಮಾಡಿದ ಪಾಕಿಸ್ತಾನ
ಎಕ್ಸ್ ಚಿತ್ರ
ಇಸ್ಲಾಮಾಬಾದ್: ಭಾರತದ ಜೊತೆ ಉದ್ವಿಗ್ನ ಪರಿಸ್ಥಿತಿ ಇರುವಾಗಲೇ ಪಾಕಿಸ್ತಾನವು 120 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಇರುವ ‘ಫತೇಹ್’ ಸರಣಿಯ ನೆಲ ಕ್ಷಿಪಣಿಯ ತರಬೇತಿ ಉಡಾವಣೆಯನ್ನು ಪಾಕಿಸ್ತಾನ ಸೋಮವಾರ ಯಶಸ್ವಿಯಾಗಿ ನೆರವೇರಿಸಿದೆ.
26 ಮಂದಿ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯ ಬಳಿಕ ಉಭಯ ರಾಷ್ಟ್ರಗಳು ಸಮರಾಭ್ಯಾಸ ನಡೆಸುತ್ತಿವೆ.
ಸದ್ಯ ನಡೆಯುತ್ತಿರುವ ‘ಇಂಡಸ್’ ಸಮರಾಭ್ಯಾಸದ ಭಾಗವಾಗಿ ಫತೇಹ್ ಸರಣಿಯ ಕ್ಷಿಪಣಿಯನ್ನು ಪರೀಕ್ಷೆ ನಡೆಸಲಾಗಿದೆ ಎಂದು ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ.
‘ಸೇನೆಯ ಕಾರ್ಯಾಚರಣೆ ಸನ್ನದ್ಧತೆ, ಕ್ಷಿಪಣಿ ಸಂಚಾರ ವ್ಯವಸ್ಥೆ ಹಾಗೂ ನಿಖರತೆ ವರ್ಧನೆ ಸೇರಿದಂತೆ ಪ್ರಮುಖ ತಾಂತ್ರಿಕ ಮಾನದಂಡಗಳನ್ನು ಪರಿಶೀಲನೆ ನಡೆಸಲು ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ’ ಎಂದು ಅದು ಹೇಳಿದೆ.
ತರಬೇತಿ ಪರೀಕ್ಷೆ ವೇಳೆ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ಪಾಕಿಸ್ತಾನದ ಕಾರ್ಯತಂತ್ರದ ಸಂಸ್ಥೆಗಳ ಎಂಜಿನಿಯರ್‌ಗಳು ಹಾಜರಿದ್ದರು.
ಪರೀಕ್ಷೆಯಲ್ಲಿ ಭಾಗಿಯಾದ ಸೈನಿಕರು, ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳಿಗೆ ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರು, ಸೇನಾ ಮುಖ್ಯಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ದೇಶದ ಪ್ರಾದೇಶಿಕ ಸಮಗ್ರತೆಯ ವಿರುದ್ಧದ ಯಾವುದೇ ಆಕ್ರಮಣವನ್ನು ತಡೆಯಲು ಸೇನೆಯ ಸನ್ನದ್ಧತೆ ಹಾಗೂ ತಾಂತ್ರಿಕ ಪ್ರಾವೀಣ್ಯತೆಯ ಬಗ್ಗೆ ಅವರು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಹಲ್ಗಾಮ್ ದಾಳಿಯ ಬೆನ್ನಲ್ಲೇ, ಭಾರತವು ಇಂಡಸ್ ಒಪ್ಪಂದ ಅಮಾನತು, ಸಿಂಧೂ ನದಿ ನೀರಿನ ಹರಿವಿಗೆ ತಡೆ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.