
ವಿಶ್ವಸಂಸ್ಥೆ: ಮ್ಯಾನ್ಮಾರ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ ನಿಲುವಿನ ಬಗ್ಗೆ ವಿಶ್ವಸಂಸ್ಥೆಯ ವಿಶೇಷ ವರದಿಗಾರರು ಮಾಡಿರುವ ವರದಿಯನ್ನು ಭಾರತ ಖಂಡಿಸಿದೆ. ಅಲ್ಲದೇ, ‘ಈ ವರದಿಯು ಏಕಪಕ್ಷೀಯ ಹಾಗೂ ಪಕ್ಷಪಾತದಿಂದ ಕೂಡಿದೆ’ ಎಂದು ಆರೋಪಿಸಿದೆ.
ಮ್ಯಾನ್ಮಾರ್‌ನಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೂರನೇ ಸಮಿತಿಯಲ್ಲಿ ಮಂಗಳವಾರ ಚರ್ಚೆ ನಡೆಯಿತು. ಭಾರತದ ಪ್ರತಿನಿಧಿಯಾಗಿ ಲೋಕಸಭಾ ಸದಸ್ಯ ದಿಲೀಪ್ ಸೈಕಿಯಾ ಅವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಅವರು, ‘ಮ್ಯಾನ್ಮಾರ್‌ನಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೈಗೊಂಡ ಎಲ್ಲಾ ಉಪಕ್ರಮಗಳಿಗೂ ಭಾರತ ಬೆಂಬಲ ನೀಡಿದೆ. ಹಿಂಸಾಚಾರವನ್ನು ಕೊನೆಗೊಳಿಸಿ, ಮಾನವೀಯ ನೆರವು ಒದಗಿಸಲು ಅವಕಾಶ ನೀಡಬೇಕು ಎಂದು ಭಾರತ ಪ್ರತಿಪಾದಿಸುತ್ತಲೇ ಇದೆ’ ಎಂದಿದ್ದಾರೆ.
ಅಲ್ಲದೇ,‘ಭಾರತ ಇಷ್ಟೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದರೂ 2025ರ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ದಾಳಿ ಘಟನೆಗೂ ಮ್ಯಾನ್ಮಾರ್ ನಿರಾಶ್ರಿತರಿಗೂ ತಳಕುಹಾಕಿ ವಿಶ್ವಸಂಸ್ಥೆಯ ವರದಿಗಾರರು ವರದಿ ರೂಪಿಸಿರುವುದು ದುರದೃಷ್ಟಕರ. ಈ ವರದಿ ಆಧಾರರಹಿತವಾದದು ಮಾತ್ರವಲ್ಲದೇ ಪಕ್ಷಪಾತದ ನಿಲುವನ್ನು ಬಿಂಬಿಸುತ್ತದೆ. ಇಂಥ ಅನಧಿಕೃತ ವರದಿಗಳನ್ನು ವಿಶ್ವಸಂಸ್ಥೆಯ ತಜ್ಞರು ಪರಿಗಣಿಸಬಾರದು’ ಎಂದೂ ಹೇಳಿದ್ದಾರೆ.
ಪಹಲ್ಗಾಮ್ ದಾಳಿಯ ಬಳಿಕ ಭಾರತ ಸರ್ಕಾರ ಮ್ಯಾನ್ಮಾರ್‌ನ ರೋಹಿಂಗ್ಯಾ ನಿರಾಶ್ರಿತರ ವಿರುದ್ಧ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ವಿಶ್ವಸಂಸ್ಥೆಯ ವಿಶೇಷ ವರದಿಗಾರರು ತಮ್ಮ ವರದಿಯಲ್ಲಿ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.