ಇಸ್ಲಮಾಬಾದ್: ಭಾರತದ ಜತೆಗಿನ ಸೇನಾ ಸಂಘರ್ಷ ಕುರಿತು ಅಮೆರಿಕಕ್ಕೆ ವಿವರಿಸಿದ್ದ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರ ನೇತೃತ್ವದ ನಿಯೋಗ ಇದೀಗ ಇಂಗ್ಲೆಂಡ್‌ಗೆ ಆಗಮಿಸಿದೆ. ಪಹಲ್ಗಾಮ್ ದಾಳಿ ನಂತರ ಭಾರತ ನಡೆಸಿದ ಸೇನಾ ಕಾರ್ಯಾಚರಣೆ ಬಗ್ಗೆ ತಿಳಿಸುವ ರಾಜತಾಂತ್ರಿಕ ಪ್ರಯತ್ನ ನಡೆಸಿದೆ.
ಒಂಬತ್ತು ಸದಸ್ಯರ ನಿಯೋಗ ಭಾನುವಾರ ವಿಶ್ವಸಂಸ್ಥೆಯ ಪ್ರತಿನಿಧಿಗಳ ಜತೆ ಚರ್ಚಿಸಿದೆ. ಅಮೆರಿಕಕ್ಕೆ ವಿವರಣೆ ನೀಡುವ ಸಂದರ್ಭದಲ್ಲಿ ಆ ದೇಶದ ಹಿರಿಯ ಅಧಿಕಾರಿಗಳು ಹಾಜರಿದ್ದರು.
‘ನಮ್ಮ ಸಂದೇಶ ಸ್ಪಷ್ಟವಾಗಿದೆ. ಪಾಕಿಸ್ತಾನ ಶಾಂತಿ ಬಯಸುತ್ತದೆ. ಸಿಂಧೂ ನದಿ ಒಪ್ಪಂದ ಸೇರಿ ಎಲ್ಲಾ ವಿಚಾರಗಳನ್ನು ಮಾತುಕತೆ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಇಚ್ಛಿಸುತ್ತದೆ’ ಎಂದು ನಿಯೋಗದ ಸದಸ್ಯ, ಪಾಕಿಸ್ತಾನದ ಮಾಜಿ ವಿದೇಶಾಂಗ ಕಾರ್ಯದರ್ಶಿ ಜಲೀಲ್ ಅಬ್ಬಾಸ್ ಜಿಲಾನಿ ಹೇಳಿದ್ದಾರೆ.
‘ಭಾರತವು ಸಿಂಧೂ ನದಿ ನೀರು ಒಪ್ಪಂದ ಅಮಾನತು ಮಾಡಿರುವುದು 24 ಕೋಟಿ ಜನರ ಬದುಕಿಗೆ ಕುತ್ತು ತಂದಿದೆ. ಇದು ಪಾಕಿಸ್ತಾನದ ಅಳಿವು–ಉಳಿವಿನ ಪ್ರಶ್ನೆ’ ಎಂದು ಪಾಕಿಸ್ತಾನ ಜನಪ್ರತಿನಿಧಿ ಖುರಮ್ ದಸ್ತ್‌ಗಿರ್ ಹೇಳಿದ್ದಾರೆ.
‘ಸಂಘರ್ಷ ಶಮನಕ್ಕೆ ಅಮೆರಿಕ ಸಹಕರಿಸಿದೆ. ಭಾರತ ಮಾತುಕತೆ ಅಥವಾ ಜಂಟಿ ತನಿಖೆಯನ್ನು ಬಯಸುತ್ತಿಲ್ಲ. ದ್ವಿಪಕ್ಷೀಯ ವಿಚಾರ ಬಗೆಹರಿಸಿಕೊಳ್ಳಲು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನೂ ಒಪ್ಪುತ್ತಿಲ್ಲ. ಹೀಗಾಗಿ ನಾವು ಮಧ್ಯಪ್ರವೇಶ ಬಯಸುತ್ತಿದ್ದೇವೆ’ ಎಂದರು.
ಇಂಗ್ಲೆಂಡ್‌ನಲ್ಲಿರುವ ಪಾಕಿಸ್ತಾನ ನಿಯೋಗ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಗಡಿಯಲ್ಲಿನ ಸಂಘರ್ಷದ ಬಗ್ಗೆ ತನ್ನ ನಿಲುವು ತಿಳಿಸಲಿದೆ.
ಇತ್ತೀಚೆಗಷ್ಟೇ ಭಾರತ ಮತ್ತು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಇಂಗ್ಲೆಂಡ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲಾಮ್ಮಿ, ‘ ನಾವು ಸ್ಥಿರತೆ ಬಯಸುತ್ತೇವೆ. ಭಯೋತ್ಪಾದನೆ ಆಯಾಮದಲ್ಲಿ ನೋಡುವುದಾದರೆ ಪರಿಸ್ಥಿತಿಯ ದುರ್ಬಲತೆಯನ್ನು ಗುರುತಿಸಬೇಕಿದೆ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.