ಭಾರತ -ಪಾಕ್ ಧ್ವಜ
ಇಸ್ಲಾಮಾಬಾದ್: ತಮ್ಮ ನಡುವಿನ ವಿವಾದಾತ್ಮಕ ವಿಷಯಗಳನ್ನು ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನ ಮಾತುಕತೆಗೆ ಮುಂದಾಗಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಡಾರ್ ಕರೆ ನೀಡಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಭಯೋತ್ಪಾದನೆಯ ವಿಷಯದ ಬಗ್ಗೆ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಾಗಿ ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.
ಪಾಕಿಸ್ತಾನದ ಸೆನೆಟ್ ಅನ್ನು ಉದ್ದೇಶಿಸಿ ಮಾತನಾಡಿದ ಡಾರ್, ‘ಭಾರತದ ಜತೆ ಮಾತುಕತೆ ನಡೆಸುತ್ತೇವೆ ಎಂದು ನಾವು ಜಗತ್ತಿಗೆ ತಿಳಿಸಿದ್ದೇವೆ’ ಎಂದರು.
ಉಭಯ ದೇಶಗಳ ನಡುವೆ ಸಮಸ್ಯೆಗೆ ಕಾರಣವಾಗಿರುವ ಎಂಟು ವಿಷಯಗಳ ಕುರಿತ ‘ಸಂಯುಕ್ತ ಮಾತುಕತೆ’ಯನ್ನು ಪರ್ವೇಜ್ ಮುಷರಫ್ ಅವರು ಅಧಿಕಾರದಲ್ಲಿದ್ದಾಗ 2003ರಲ್ಲಿ ಆರಂಭಿಸಿದ್ದರು. ಆದರೆ 2008ರ ಮುಂಬೈ ಮೇಲಿನ ದಾಳಿಯ ಬಳಿಕ ಈ ಮಾತುಕತೆ ಹಳಿತಪ್ಪಿತ್ತು. ಆ ಬಳಿಕ ಮಾತುಕತೆಯನ್ನು ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲು ಆಗಿಲ್ಲ.
‘ಭಾರತದ ಜತೆಗಿನ ಕದನ ವಿರಾಮವನ್ನು ಮೇ 18ರವರೆಗೆ ವಿಸ್ತರಿಸಲಾಗಿದೆ. ಉಭಯ ದೇಶಗಳ ನಡುವಿನ ವಿವಾದ ಬಗೆಹರಿಯಬೇಕಾದರೆ ರಾಜಕೀಯ ಮಾತುಕತೆ ನಡೆಯಬೇಕು’ ಎಂದು ಪಾಕಿಸ್ತಾನದ ಉಪ ಪ್ರಧಾನಿಯೂ ಆಗಿರುವ ಅವರು ಹೇಳಿದರು.
ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕರು (ಡಿಜಿಎಂಒ) ಕದನ ವಿರಾಮ ಒಪ್ಪಂದ ಕುರಿತು ಮೇ 18ರಂದು ಮತ್ತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿರಿಸಿ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ತಡೆದರೆ ಅದನ್ನು ‘ಯುದ್ಧಕ್ಕೆ ಸಮನಾದ ಕೃತ್ಯ’ಎಂದು ಪರಿಗಣಿಸುವುದಾಗಿ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.