ಬಿಲಾವಲ್ ಭುಟ್ಟೊ
ಇಸ್ಲಾಮಾಬಾದ್: ‘ಭಾರತ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳ ನಡುವಿನ ಸಹಕಾರದಿಂದ ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಯನ್ನು ಗಣನೀಯವಾಗಿ ತಗ್ಗಿಸಬಹುದು’ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಮತ್ತು ಅಲ್ಲಿನ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಹೇಳಿದರು.
ಭಾರತದೊಂದಿಗಿನ ಇತ್ತೀಚಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಜಾಗತಿಕ ರಾಜತಾಂತ್ರಿಕ ಬೆಂಬಲ ಪಡೆಯುವುದರ ಭಾಗವಾಗಿ ಬಿಲಾವಲ್ ಭುಟ್ಟೊ ಅವರು ಉನ್ನತ ಅಧಿಕಾರಿಗಳ ನಿಯೋಗದೊಂದಿಗೆ ಅಮೆರಿಕ ಪ್ರವಾಸದಲ್ಲಿದ್ದಾರೆ. ಮಂಗಳವಾರ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗುಪ್ತಚರ ಸಂಸ್ಥೆಗಳಾದ ಐಎಸ್‌ಐ ಮತ್ತು ‘ರಾ’ ಜತೆಗೂಡಿ ಕೆಲಸ ಮಾಡಿದರೆ ಭಾರತ ಹಾಗೂ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಗಣನೀಯವಾಗಿ ತಗ್ಗುವ ಸಂಪೂರ್ಣ ವಿಶ್ವಾಸ ತಮಗಿದೆ ಎಂದು ಭುಟ್ಟೊ ಹೇಳಿರುವುದಾಗಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.
‘ಅಣ್ವಸ್ತ್ರ, ಶಸ್ತ್ರಾಸ್ತ್ರ ಸಾಮರ್ಥ್ಯ ಹೊಂದಿರುವ ಎರಡು ದೇಶಗಳ ನಡುವಿನ ಸಂಘರ್ಷದ ಒತ್ತಡ ಇತ್ತೀಚೆಗೆ ಹೆಚ್ಚಿದೆಯೇ ಹೊರತು ಕಡಿಮೆಯಾಗಿಲ್ಲ. ವಿಶ್ವ ಸಮುದಾಯ ಇದನ್ನು ಗಮನಿಸಬೇಕು’ ಎಂದು ಭುಟ್ಟೊ ಹೇಳಿದ್ದಾರೆ.
‘ಭಾರತ – ಪಾಕ್ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ವಹಿಸಿದ ಪಾತ್ರವನ್ನು ಸ್ಮರಿಸುತ್ತೇನೆ. ಇದು ಸ್ವಾಗತಾರ್ಹ. ಆದರೆ, ಇದು ಮೊದಲ ಹೆಜ್ಜೆ ಮಾತ್ರ’ ಎಂದು ಅವರು ಹೇಳಿದರು.
‘ರಾಜತಾಂತ್ರಿಕತೆ ಮತ್ತು ಮಾತುಕತೆಯಿಂದ ಮಾತ್ರ ಶಾಂತಿ ಸ್ಥಾಪನೆ ಸಾಧ್ಯ. ಭಯೋತ್ಪಾದನೆ ತಗ್ಗಿಸುವ ನಿಟ್ಟಿನಲ್ಲಿ ಭಾರತಕ್ಕೆ ಪಾಕಿಸ್ತಾನ ಈಗಲೂ ಸಹಕಾರ ನೀಡಲಿದೆ. 150ರಿಂದ 170ಕೋಟಿ ಜನರ ಭವಿಷ್ಯವನ್ನು ಭಯೋತ್ಪಾದಕರ ಕೈಯಲ್ಲಿಡಲು ಸಾಧ್ಯವಿಲ್ಲ’ ಎಂದರು.
‘ಭಯೋತ್ಪಾದಕ ದಾಳಿ ನಡೆದಾಗ, ಅದರಿಂದ ಪಾಕಿಸ್ತಾನದೊಂದಿಗೆ ಭಾರತದ ಯುದ್ಧದ ಸಾಧ್ಯತೆ ಹೆಚ್ಚಿಸಲಿದೆ’ ಎಂದು ವಿಶ್ಲೇಷಿಸುವುದು ಸಮರ್ಥನೀಯವಲ್ಲ. ಅಣ್ವಸ್ತ್ರ ಸಾಮರ್ಥ್ಯದ ಎರಡು ದೇಶಗಳ ನಡುವಿನ ಸಂಘರ್ಷ ಕೊನೆಗಾಣಿಸುವಂತಹ ಯಾವುದೇ ವ್ಯವಸ್ಥೆ ಇಲ್ಲ. ಜಂಟಿ ತನಿಖೆ, ಪರಸ್ಪರ ಸಹಕಾರದಿಂದ ಮಾತ್ರ ಭಯೋತ್ಪಾದನೆ ನಿಗ್ರಹ ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.