ಪೆಶಾವರ/ಇಸ್ಲಾಮಾಬಾದ್: ಪಾಕಿಸ್ತಾನದಿಂದ 14 ಲಕ್ಷಕ್ಕೂ ಹೆಚ್ಚಿನ ಅಫ್ಗನ್ ನಿರಾಶ್ರಿತರನ್ನು ವಾಪಸು ಕಳುಹಿಸಲಾಗಿದೆ ಎಂದು ಶುಕ್ರವಾರ ಸರ್ಕಾರ ಹೇಳಿದೆ. ಇನ್ನೂ ದೇಶದಲ್ಲೇ ಉಳಿದಿರುವವರಿಗೆ ಸಮಯಾವಕಾಶದ ವಿಸ್ತರಣೆ ನೀಡಲಾಗುವುದಿಲ್ಲ. ಅವರು ಕೂಡ ವಾಪಸಾಗುವುದನ್ನು ಖಚಿತಪಡಿಸಲಾಗುವುದು ಎಂದು ಅದು ತಿಳಿಸಿದೆ.
ಅಫ್ಗನ್ ನಿರಾಶ್ರಿತರನ್ನು ವಾಪಸು ಕಳುಹಿಸುವ ಕುರಿತು ನಡೆದ, ಪ್ರಧಾನಿ ಶೆಹಬಾಜ್ ಶರೀಫ್ ಅಧ್ಯಕ್ಷತೆ ವಹಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ಘೋಷಣೆ ಹೊರಬಿದ್ದಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್, ಪಂಜಾಬ್, ಸಿಂಧ್ ಮತ್ತು ಬಲೂಚಿಸ್ತಾನದ ಮುಖ್ಯಮಂತ್ರಿಗಳು ಸೇರಿದಂತೆ ಇತರರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಅಫ್ಗನ್ ನಿರಾಶ್ರಿತರನ್ನು ಹಂತಹಂತವಾಗಿ ವಾಪಸು ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಭಾಗವಹಿಸಿದರಿಗೆ ತಿಳಿಸಲಾಯಿತು. ‘ಪಾಕಿಸ್ತಾನಿ ವೀಸಾ ಹೊಂದಿರುವ ಅಫ್ಗಾನಿಗಳಿಗೆ ಮಾತ್ರ ದೇಶದಲ್ಲಿ ಉಳಿಯಲು ಅವಕಾಶ ನೀಡಲಾಗುವುದು’ ಎಂದು ಹೇಳಿಕೆ ತಿಳಿಸಿದೆ.
28 ಶಿಬಿರ ಮುಚ್ಚಿದ ಪಾಕ್: ಪಾಕಿಸ್ತಾನದಾದ್ಯಂತ ಅಕ್ರಮ ವಿದೇಶಿ ನಿವಾಸಿಗಳ ವಿರುದ್ಧದ ಕ್ರಮವನ್ನು ತೀವ್ರಗೊಳಿಸಲಾಗಿದ್ದು, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಅಫ್ಗನ್ ನಿರಾಶ್ರಿತರ 28 ಶಿಬಿರಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.