ADVERTISEMENT

ಹಿಂದೂ ಬಾಲಕಿಯರಿಗೆ ಭದ್ರತೆ ಪಾಕಿಸ್ತಾನ ಹೈಕೋರ್ಟ್ ಆದೇಶ

ಪಿಟಿಐ
Published 26 ಮಾರ್ಚ್ 2019, 19:33 IST
Last Updated 26 ಮಾರ್ಚ್ 2019, 19:33 IST
   

ಇಸ್ಲಾಮಾಬಾದ್: ಸಿಂಧ್ ಪ್ರಾಂತದಲ್ಲಿ ಅಪಹರಣಗೊಂಡುಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಕ್ಕೊಳಗಾಗಿದ್ದ ಇಬ್ಬರು ಹಿಂದೂ ಬಾಲಕಿಯರಿಗೆ ಭದ್ರತೆ ಒದಗಿಸುವಂತೆ ಪಾಕಿಸ್ತಾನದ ಹೈಕೋರ್ಟ್, ಸರ್ಕಾರಕ್ಕೆ ಆದೇಶಿಸಿದೆ. ಜತೆಗೆ ಏಪ್ರಿಲ್ 2ರಂದು ತನಿಖಾ ವರದಿಯನ್ನು ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದೆ.

ಬಾಲಕಿಯರಾದ ರವೀನಾ (13), ರೀನಾ (15) ಅವರನ್ನು ಮತಾಂತರಗೊಳಿಸಿದಬಳಿಕ ಅವರಿಗೆ ಮದುವೆ ಮಾಡಿಸಲಾಗಿದೆಯೆ ಎನ್ನುವ ಕುರಿತು ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ತನಿಖೆಯಿಂದ ತಮ್ಮ ಮೇಲೆ ಪ್ರತಿಕೂಲ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ರಕ್ಷಣೆ ಒದಗಿಸಬೇಕೆಂದು ಬಾಲಕಿಯರು ಹಾಗೂ ಅವರ ಪತಿಯಂದಿರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದಮುಖ್ಯ ನ್ಯಾಯಮೂರ್ತಿ ಅಥರ್ ಮಿನಲ್ಲಾ, ‘ಬಾಲಕಿಯರನ್ನು ಇಸ್ಲಾಮಾಬಾದ್ ಉಪ ಆಯುಕ್ತ ಮತ್ತು ಮಾನವ ಹಕ್ಕುಗಳ ಪ್ರಧಾನ ನಿರ್ದೇಶಕರ ವಶಕ್ಕೆ ನೀಡಬೇಕು. ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಬಾಲಕಿಯರ ಜತೆಗೆ ಇರಿಸಬೇಕು’ ಎಂದು ಆದೇಶಿಸಿದ್ದಾರೆ.

ADVERTISEMENT

ನ್ಯಾಯ ಒದಗಿಸಿ: ಸುಷ್ಮಾ ಸ್ವರಾಜ್

ನವದೆಹಲಿ: ‘ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ಇಬ್ಬರು ಹಿಂದೂ ಬಾಲಕಿಯರನ್ನು ಶೀಘ್ರವೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ’ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.

‘ಈ ಇಬ್ಬರು ಬಾಲಕಿಯರನ್ನು ಕೂಡಲೇ ಅವರ ಕುಟುಂಬಕ್ಕೆ ಒಪ್ಪಿಸಬೇಕು’ ಎಂದು ಮಂಗಳವಾರ ಟ್ವೀಟ್‌ ಮೂಲಕ ಪಾಕಿಸ್ತಾನವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.