ADVERTISEMENT

ಮಸೀದಿ ದಾಳಿ: ಹೊಣೆ ಹೊತ್ತ ಐಎಸ್‌

ದಾಳಿ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ

ಪಿಟಿಐ
Published 11 ಜನವರಿ 2020, 20:00 IST
Last Updated 11 ಜನವರಿ 2020, 20:00 IST
   

ಕರಾಚಿ: ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್‌ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್
(ಐಎಸ್‌) ಉಗ್ರ ಸಂಘಟನೆ ಹೊತ್ತುಕೊಂಡಿದೆ.

ಪಾಕಿಸ್ತಾನದ ಟೆಲಿಗ್ರಾಂ ಚಾನೆಲ್ ಮತ್ತು ಕೆಲ ವಿದೇಶಿ ತಂತಿ ಸೇವೆಗಳಿಗೆ ಐಎಸ್‌ ಕಳುಹಿಸಿದ ಸಂದೇಶಗಳಲ್ಲಿ, ‘ಕೆಲವು ಅಫ್ಗನ್ ತಾಲಿಬಾನ್ ಸದಸ್ಯರನ್ನು ಗುರಿಯಾಗಿರಿಸಿಕೊಂಡು ಈ ದಾಳಿಯನ್ನು ನಡೆಸಲಾಗಿದೆ’ಎಂದು ಹೇಳಿಕೊಂಡಿದೆ.ಆದರೆ, ಕ್ವೆಟ್ಟಾ ಮಸೀದಿಯೊಳಗೆ ಯಾವುದೇ ಅಫ್ಗನ್ ತಾಲಿಬಾನ್ ಸದಸ್ಯರು ಇರಲಿಲ್ಲ’ ಎಂದು ತಾಲಿಬಾನ್ ವಕ್ತಾರ ಖಾರಿ ಮೊಹಮ್ಮದ್ ಯೂಸುಫ್ ಸ್ಪಷ್ಟಪಡಿಸಿದ್ದಾರೆ.

ವರದಿಗೆ ಸೂಚನೆ:ಸ್ಫೋಟದ ಕುರಿತು ತಕ್ಷಣವೇ ವರದಿ ನೀಡುವಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶನಿವಾರ ಸೂಚಿಸಿದ್ದಾರೆ.

ADVERTISEMENT

‘ಕ್ವೆಟ್ಟಾ ಮಸೀದಿ ದಾಳಿಯ ಬಗ್ಗೆ ತಕ್ಷಣದ ವರದಿ ಸಲ್ಲಿಸುವಂತೆ ನಾನು ಕೋರಿದ್ದೇನೆ. ಗಾಯಾಳುಗಳಿಗೆ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವನ್ನು ಕೇಳಿದ್ದೇನೆ. ದಾಳಿಯಲ್ಲಿ ಹುತಾತ್ಮರಾದ ಡಿಎಸ್ಪಿ ಹಾಜಿ ಅಮಾನುಲ್ಲಾ ಅವರು ಧೈರ್ಯಶಾಲಿ ಮತ್ತು ಅನುಕರಣೀಯ ಅಧಿಕಾರಿ’ ಎಂದು ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ಈ ಕೃತ್ಯವನ್ನು ‘ಹೇಡಿತನದ ಭಯೋತ್ಪಾದಕ ದಾಳಿ’ ಎಂದೂ ಖಂಡಿಸಿದ್ದಾರೆ.

ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ನಡೆದ ದಾಳಿಯಲ್ಲಿ ಒಟ್ಟು 16 ಮಂದಿ ಸಾವನ್ನಪ್ಪಿ, 19 ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.