ADVERTISEMENT

ಕೊರೊನಾ ಸೋಂಕಿದ್ದರೂ ಭೌತಿಕ ಸಭೆ ನಡೆಸಿದ ಇಮ್ರಾನ್ ವಿರುದ್ಧ ಟೀಕೆಗಳ ಸುರಿಮಳೆ

ಮಾಧ್ಯಮ ತಂಡದೊಂದಿಗೆ ಸಭೆ; ಸಾಮಾಜಿಕ ಜಾಲತಾಣದಲ್ಲಿ ಸಭೆ ಫೋಟೊ ಪೋಸ್ಟ್‌ ಮಾಡಿದ ಸಚಿವರು

ಪಿಟಿಐ
Published 26 ಮಾರ್ಚ್ 2021, 11:34 IST
Last Updated 26 ಮಾರ್ಚ್ 2021, 11:34 IST
ಇಮ್ರಾನ್ ಖಾನ್ ಸಭೆ ನಡೆಸುತ್ತಿರುವ ಚಿತ್ರಚಿತ್ರ: ಶಿಬ್ಲಿ ಫರಾಜ್‌ ಟ್ವಿಟರ್ ಖಾತೆ
ಇಮ್ರಾನ್ ಖಾನ್ ಸಭೆ ನಡೆಸುತ್ತಿರುವ ಚಿತ್ರಚಿತ್ರ: ಶಿಬ್ಲಿ ಫರಾಜ್‌ ಟ್ವಿಟರ್ ಖಾತೆ   

ಇಸ್ಲಾಮಾಬಾದ್‌: ಕೊರೊನಾ ಸೋಂಕಿಗೆ ಒಳಗಾಗಿದ್ದರೂ ತಮ್ಮ ಮಾಧ್ಯಮ ತಂಡದೊಂದಿಗೆ ಭೌತಿಕವಾಗಿ ಸಭೆ ನಡೆಸಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ವಿರೋಧ ಪಕ್ಷ ಹಾಗೂ ಸಾರ್ವಜನಿಕರಿಂತ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಇಮ್ರಾನ್‌ ಖಾನ್ ಅವರು ಗುರುವಾರ ಕೋವಿಡ್‌ ಲಸಿಕೆಯ ಮೊದಲ ಡೋಸೇಜ್ ತೆಗೆದುಕೊಂಡಿದ್ದರು. ಆದರೆ, ಶನಿವಾರ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದೇ ದಿನ, ದೇಶದ ಪ್ರಥಮ ಮಹಿಳೆ ಬುಶ್ರಾ ಬಿಬಿ ಅವರಿಗೂ ಕೊರೊನಾ ಸೋಂಕು ದೃಡಪಟ್ಟಿತ್ತು.

ಇಮ್ರಾನ್ ಖಾನ್ ಅವರು ತಮ್ಮ ‘ಬನಿಗಾಲ‘ ನಿವಾಸದಲ್ಲಿ ಗುರುವಾರ ಮಾಧ್ಯಮ ತಂಡದೊಂದಿಗೆ ಸಭೆ ನಡೆಸಿದ್ದಾರೆ. ಸಭೆ ನಡೆಸುತ್ತಿರುವ ಫೋಟೊವನ್ನು,‌ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶಿಬ್ಲಿ ಫರಾಜ್ ಮತ್ತು ಶಾಸಕ ಫೈಸಲ್ ಜಾವೇದ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದರು. ಇದಾದ ನಂತರ ಪ್ರಧಾನ ಮಂತ್ರಿ ವಿರುದ್ಧ ಸಾರ್ವಜನಿಕರಿಂದ ತೀವ್ರ ಟೀಕೆಗಳು ವ್ಯಕ್ತವಾಗಿವೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ADVERTISEMENT

ಪಾಕಿಸ್ತಾನದಲ್ಲಿ ‘ಕೋವಿಡ್‌ 19‘ ಮೂರನೇ ಅಲೆ ಕಾಣಿಸಿಕೊಳ್ಳುತ್ತಿರುವ ಸಮಯದಲ್ಲಿ ಸ್ವತಃ ಪ್ರಧಾನಿಯವರೇ ‘ಕೋವಿಡ್‌ ನಿಗದಿತ ಕಾರ್ಯವಿಧಾನ(ಎಸ್‌ಒಪಿ)‘ವನ್ನು ಉಲ್ಲಂಘಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಸಭೆಯಲ್ಲಿ ಭಾಗವಹಿಸಿರುವವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ವಿರೋಧ ಪಕ್ಷಗಳು ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.