ADVERTISEMENT

ಪಾಕ್ ಪಂಜಾಬ್‌ ಪ್ರಾಂತ್ಯದ ಚರ್ಚ್‌ಗಳ ಮೇಲಿನ ದಾಳಿ: ಇಬ್ಬರು ಶಂಕಿತರ ಬಂಧನ

ಪಿಟಿಐ
Published 18 ಆಗಸ್ಟ್ 2023, 13:48 IST
Last Updated 18 ಆಗಸ್ಟ್ 2023, 13:48 IST
   

ಲಾಹೋರ್: ಧರ್ಮನಿಂದನೆ ಆರೋಪದ ಹಿನ್ನೆಲೆಯಲ್ಲಿ ಪಂಜಾಬ್‌ ಪ್ರಾಂತ್ಯದ ಚರ್ಚ್‌ಗಳ ಮೇಲಿನ ದಾಳಿ ಪ್ರಕರಣಕ್ಕೆ  ಸಂಬಂಧಿಸಿದಂತೆ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ ಎಂದು ಪಂಜಾಬ್‌ ಉಸ್ತುವಾರಿ ಮುಖ್ಯಮಂತ್ರಿ ಮೋಹ್ಸಿನ್‌ ನಖ್ವಿ ಹೇಳಿದ್ದಾರೆ. 

ಶಂಕಿತರ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿರುವ ಇನ್‌ಸ್ಪೆಕ್ಟರ್‌ ಜನರಲ್ ಆಫ್ ಪೊಲೀಸ್‌ ಮತ್ತು ಮುಖ್ಯ ಕಾರ್ಯದರ್ಶಿ ಅವರ ಕಾರ್ಯವನ್ನು ಶ್ಲಾಘಿಸಿರುವ ನಖ್ವಿ, ಘಟನೆಗೆ ಕಾರಣರಾದ ಆರೋಪಿಗಳು ಸದ್ಯ ಪೊಲೀಸ್ ವಶದಲ್ಲಿದ್ದಾರೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ. 

ಪಂಜಾಬ್‌ ಪೊಲೀಸರು ಈವರೆಗೂ 140 ಜನರನ್ನು ಬಂಧಿಸಿ, ಐದು ಪ್ರಕರಣಗಳನ್ನು ದಾಖಲಿಸಿದ್ದಾರೆ. ಬಂಧಿತರಲ್ಲಿ ಶಂಕಿತ ಮುಹಮ್ಮದ್ ಯಾಸಿನ್ ಸಹ ಸೇರಿದ್ದಾನೆ. ಆತ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಮುಸ್ಲಿಮರನ್ನು ಪ್ರಚೋದಿಸಲು ಮಸೀದಿಗಳ ಧ್ವನಿವರ್ಧಕಗಳಲ್ಲಿ ಘೋಷಣೆ ಮಾಡುತ್ತಿರುವುದು ಕಂಡು ಬಂದಿದೆ. ದಾಳಿ ನಡೆಸಿದ ಉಗ್ರಗಾಮಿ ಗುಂಪು ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಕಾರ್ಯಕರ್ತರನ್ನು ಸಹ ಬಂಧಿಸಲಾಗಿದೆ. 

ADVERTISEMENT

ಜರನ್ವಾಲಾ ಘಟನೆಯನ್ನು ರಾಷ್ಟ್ರೀಯ ನಾಯಕರು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಖಂಡಿಸಿವೆ.  ಚರ್ಚ್‌ಗಳು ಮತ್ತು ಮನೆಗಳ ಮೇಲೆ ದಾಳಿ ಮಾಡಿರುವುದಕ್ಕೆ‌ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ.

‘ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಮತ್ತು ಶಾಂತಿಗೆ ಕರೆ ನೀಡುವಂತೆ ಪಾಕಿಸ್ತಾನದ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ’ ಎಂದು ಅಮೆರಿಕ ವಕ್ತಾರ ವೇದಾಂತ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದರು.

ಉದ್ರಿಕ್ತ ಗುಂಪು, ಫೈಸಲಾಬಾದ್ ಜಿಲ್ಲೆಯ ಜರನ್ವಾಲಾ ತಹಸಿಲ್‌ನಲ್ಲಿ 21 ಚರ್ಚ್‌ಗಳು ಮತ್ತು ಕ್ರೈಸ್ತ ಸಮುದಾಯದ 35 ಮನೆಗಳಿಗೆ ಬುಧವಾರ ಬೆಂಕಿ ಹಚ್ಚಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.