ADVERTISEMENT

ರಕ್ಷಣಾ ಬಜೆಟ್‌ ಕಡಿತಗೊಳಿಸಿದ ಪಾಕ್‌ ಸೇನೆ

ದೇಶದ ಆರ್ಥಿಕ ಸಂಕಷ್ಟಕ್ಕೆ ಸ್ಪಂದನೆ: ಸ್ವಯಂಪ್ರೇರಿತ ನಿರ್ಧಾರ

ಪಿಟಿಐ
Published 5 ಜೂನ್ 2019, 19:55 IST
Last Updated 5 ಜೂನ್ 2019, 19:55 IST
ಪಾಕ್‌ ಸೇನೆ
ಪಾಕ್‌ ಸೇನೆ   

ಇಸ್ಲಾಮಾಬಾದ್‌(ಪಿಟಿಐ): ಮುಂದಿನ ಹಣಕಾಸು ವರ್ಷದಲ್ಲಿ ರಕ್ಷಣಾ ವೆಚ್ಚ ಕಡಿತಗೊಳಿಸಲು ಪಾಕಿಸ್ತಾನ ಸೇನೆ ನಿರ್ಧರಿಸಿದೆ.

ದೇಶವು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಪಾಕಿಸ್ತಾನ ಸೇನೆ ಸ್ವಯಂ ಪ್ರೇರಿತವಾಗಿ ಈ ನಿರ್ಧಾರ ಕೈಗೊಂಡಿದ್ದು, ಇದೊಂದು ಅಪರೂಪದ ವಿದ್ಯಮಾನ ಎಂದು ಹೇಳಲಾಗಿದೆ.

‘ರಕ್ಷಣೆ ಮತ್ತು ಭದ್ರತೆ ವಿಷಯದಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳದೆಯೇ ರಕ್ಷಣಾ ವೆಚ್ಚ ಕಡಿತಗೊಳಿಸಲಾಗುವುದು. ಎಲ್ಲ ರೀತಿಯ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಪ್ರತ್ಯುತ್ತರ ನೀಡಲಾಗುವುದು’ ಎಂದು ಸೇನೆಯ ಮಾಧ್ಯಮ ಘಟಕದ ಮಹಾನಿರ್ದೇಶಕ ಮೇಜರ್‌ ಜನರಲ್‌ ಅಸೀಫ್‌ ಘಫೂರ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಇದು ಸಣ್ಣ ನಿರ್ಧಾರವಲ್ಲ. ಬಲಿಷ್ಠವಾದ ಸರ್ಕಾರ ಮತ್ತು ಸೇನೆ ನಡುವೆ ಸಮನ್ವಯ ಇದ್ದಾಗ ಮಾತ್ರ ಪಾಕಿಸ್ತಾನವನ್ನು ಆಡಳಿತ ಮತ್ತು ಆರ್ಥಿಕತೆಯ ಗಂಭೀರ ಸಮಸ್ಯೆಗಳಿಂದ ಪಾರು ಮಾಡಲು ಸಾಧ್ಯ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್‌ ಚೌಧರಿ ತಿಳಿಸಿದ್ದಾರೆ.

ಇಮ್ರಾನ್‌ ಖಾನ್‌ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸರ್ಕಾರದ ವೆಚ್ಚಗಳನ್ನು ಕಡಿತಗೊಳಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು.

ಜೂನ್‌ 11ರಂದು ಸರ್ಕಾರದ ಬಜೆಟ್‌ ಮಂಡನೆಯಾಗಲಿದೆ. ಸೇನೆ ಸೇರಿದಂತೆ ಎಲ್ಲ ಸರ್ಕಾರಿ ಸಂಸ್ಥೆಗಳು ಖರ್ಚು ಕಡಿಮೆಗೊಳಿಸಲು ಸಹಕಾರ ನೀಡಲಿವೆ ಎಂದು ಪಾಕಿಸ್ತಾನ ಸರ್ಕಾರ ಕಳೆದ ತಿಂಗಳು ತಿಳಿಸಿತ್ತು.

‘ಮುಂದಿನ ಬಜೆಟ್‌ನಲ್ಲಿ ವೆಚ್ಚ ಕಡಿಮೆಗೊಳಿಸುವ ಪ್ರಸ್ತಾವಗಳಿವೆ. ಸರ್ಕಾರದ ವೆಚ್ವವನ್ನು ಸಾಧ್ಯವಾದಷ್ಟು ಕಡಿತಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ’ ಎಂದುಪ್ರಧಾನಿ ಸಲಹೆಗಾರ ಹಫೀಜ್‌ ಶೇಖ್‌ ತಿಳಿಸಿದ್ದಾರೆ.

ಸೇನೆ ಕ್ರಮಕ್ಕೆ ಪ್ರಧಾನಿ ಇಮ್ರಾನ್‌ ಖಾನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‌

2018ರಲ್ಲಿ ಅತಿ ಹೆಚ್ಚು ವೆಚ್ಚ

2018ರಲ್ಲಿ 11.4 ಶತಕೋಟಿ ಡಾಲರ್‌ (₹789.34 ಶತಕೋಟಿ) ವೆಚ್ಚ ಮಾಡುವ ಮೂಲಕ ಪಾಕಿಸ್ತಾನ ಜಗತ್ತಿನಲ್ಲೇ ಅತಿ ಖರ್ಚು ಮಾಡಿದ 20ನೇ ದೇಶವಾಗಿತ್ತು. ಈ ಬಗ್ಗೆ ಸ್ಟಾಕ್‌ ಹೋಮ್‌ ಅಂತರರಾಷ್ಟ್ರೀಯ ಶಾಂತಿ ಸಂಶೋಧನೆ ಸಂಸ್ಥೆ ವರದಿ ಸಿದ್ಧಪಡಿಸಿತ್ತು.

ಈ ವೆಚ್ಚವು ಪಾಕ್‌ನ ಜಿಡಿಪಿಯ ಶೇಕಡ 4ರಷ್ಟಿತ್ತು. ಜಗತ್ತಿನಲ್ಲೇ ಅಮೆರಿಕ ಸೇನೆಗಾಗಿ ಅತಿ ಹೆಚ್ಚು ಖರ್ಚು ಮಾಡುತ್ತದೆ. ಕಳೆದ ವರ್ಷ 649 ಡಾಲರ್‌ ಶತಕೋಟಿ (₹44936.76 ಶತಕೋಟಿ) ಅಮೆರಿಕ ವೆಚ್ಚ ಮಾಡಿತ್ತು. ಕಳೆದ ಒಂದು ದಶಕದಲ್ಲಿ ಸೇನೆಯ ವೆಚ್ಚ ಶೇಕಡ 17ರಷ್ಟು ಏರಿಕೆಯಾಗಿದೆ.

ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸೇನೆ ಕೈಗೊಂಡ ಕ್ರಮ ಶ್ಲಾಘನೀಯ. ಉಳಿತಾಯವಾಗುವ ಹಣವನ್ನು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು

– ಇಮ್ರಾನ್‌ ಖಾನ್‌, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.