ADVERTISEMENT

ವಿಶ್ವಸಂಸ್ಥೆಯ ವರದಿಗೆ ಭಾರತದ ಸಮರ್ಥನೆ: ಪಾಕ್ ತಿರಸ್ಕಾರ

ಪಿಟಿಐ
Published 8 ಜೂನ್ 2020, 14:32 IST
Last Updated 8 ಜೂನ್ 2020, 14:32 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ಇಸ್ಲಾಮಾಬಾದ್: ‘ಭಯೋತ್ಪಾದನೆ ಕುರಿತು ವಿಶ್ವಸಂಸ್ಥೆಯ ಇತ್ತೀಚಿನ ವರದಿಯನ್ನು ಭಾರತ ದುರುದ್ದೇಶಪೂರಕವಾಗಿ ಸಮರ್ಥಿಸಿಕೊಂಡಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಸೋಮವಾರ ಹೇಳಿದೆ.

‘ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರ ಬಿಂದು’ ಎಂಬ ವಾಸ್ತವವನ್ನು ಅಂತರರಾಷ್ಟ್ರೀಯ ಸಮುದಾಯದ ಚೆನ್ನಾಗಿ ತಿಳಿದಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಇತ್ತೀಚೆಗೆ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ‍ಪಾಕಿಸ್ತಾನದ ವಿದೇಶಾಂಗ ಕಚೇರಿಯು, ‘ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಗಳನ್ನು ಭಾರತ ಸಂಪೂರ್ಣವಾಗಿ ತಿರುಚಿದೆ. ಇದು ಖಂಡನೀಯ. ಭಾರತದ ಈ ಹೇಳಿಕೆಯು ಕಾಶ್ಮೀರದಿಂದ ಅಂತರರಾಷ್ಟ್ರೀಯ ಗಮನವನ್ನು ಬೇರೆಡೆಗೆ ಸೆಳೆಯುವ ಅಭಿಯಾನದ ಮುಂದುವರಿಕೆಯಾಗಿದೆ’ ಎಂದು ಹೇಳಿತ್ತು.

ADVERTISEMENT

‘ವಿಶ್ವಸಂಸ್ಥೆಯ ವಿಶ್ಲೇಷಣಾತ್ಮಕ ಬೆಂಬಲ ಮತ್ತು ಮೇಲ್ವಿಚಾರಣಾ ತಂಡದ ವರದಿಯನ್ನು ಭಾರತ ವಿರೂಪಗೊಳಿಸಿ, ತಪ್ಪಾಗಿ ನಿರೂಪಿಸಲು ಯತ್ನಿಸುತ್ತಿದೆ. ಇದು ವಿಶ್ವ ಸಮುದಾಯದ ದಾರಿಯನ್ನು ತಪ್ಪಿಸುವುದಿಲ್ಲ ಎಂಬುದು ನಮಗೆ ಖಾತ್ರಿಯಿದೆ’ ಎಂದೂ ಪಾಕಿಸ್ತಾನಹೇಳಿದೆ.

‘ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಭಯೋತ್ಪಾದಕರಲ್ಲಿ ಸುಮಾರು 6,500 ಭಯೋತ್ಪಾದಕರು ಪಾಕಿಸ್ತಾನಕ್ಕೆ ಸೇರಿದವರು. ಪಾಕಿಸ್ತಾನದ ಮೂಲದ ಜೈಷ್–ಎ–ಮೊಹಮ್ಮದ್ ಮತ್ತು ಲಷ್ಕರ್–ಎ–ತಯಬಾ ಭಯೋತ್ಪಾದನಾ ಸಂಘಟನೆಗಳು ಅಫ್ಘಾನಿಸ್ತಾನಕ್ಕೆ ಭಯೋತ್ಪಾದಕರನ್ನು ಕಳ್ಳಸಾಗಣೆ ಮಾಡುವ ಕಾರ್ಯದಲ್ಲಿ ನಿರತವಾಗಿವೆ’ ಎಂದು ವಿಶ್ವಸಂಸ್ಥೆಯು ತನ್ನ ವರದಿಯಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.