ADVERTISEMENT

ಚೀನಾ ಮೂಲದ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಪಾಕಿಸ್ತಾನ‌ ಒಪ್ಪಿಗೆ

ಪಿಟಿಐ
Published 18 ಆಗಸ್ಟ್ 2020, 14:17 IST
Last Updated 18 ಆಗಸ್ಟ್ 2020, 14:17 IST
ಅಡೆನೊವೈರಸ್‌ ಟೈಪ್‌–5 ವೆಕ್ಟರ್‌ ಲಸಿಕೆ 
ಅಡೆನೊವೈರಸ್‌ ಟೈಪ್‌–5 ವೆಕ್ಟರ್‌ ಲಸಿಕೆ    

ಇಸ್ಲಾಮಾಬಾದ್‌:ಕೋವಿಡ್‌–19 ಚಿಕಿತ್ಸೆಗಾಗಿ ಚೀನಾದ ಕಂಪನಿಯೊಂದರ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಸಂಭಾವ್ಯ ಲಸಿಕೆಯ ಮೂರನೇ ಹಂತದಕ್ಲಿನಿಕಲ್ ಟ್ರಯಲ್‌ಗೆ ಪಾಕಿಸ್ತಾನದ ಔಷಧ ನಿಯಂತ್ರಕ ಪ್ರಾಧಿಕಾರ ಒಪ್ಪಿಗೆ ನೀಡಿದೆ.

‘ಪಾಕಿಸ್ತಾನದ ಔಷಧ ನಿಯಂತ್ರಕ ಪ್ರಾಧಿಕಾರವು(ಡಿಆರ್‌ಎಪಿ) ಚೀನಾದ ಬೀಜಿಂಗ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬಯೋಟೆಕ್ನಾಲಜಿ ಸಹಯೋಗದಲ್ಲಿ ಕ್ಯಾನ್‌ಸಿನೊಬಯೋ ಅಭಿವೃದ್ಧಿಪಡಿಸಿರುವ ಅಡೆನೊವೈರಸ್‌ ಟೈಪ್‌–5 ವೆಕ್ಟರ್‌ (Ad5-nCoV) ಹೆಸರಿನ ಸಂಭಾವ್ಯ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ನ 3ನೇ ಹಂತಕ್ಕೆ ಒಪ್ಪಿಗೆ ನೀಡಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ(ಎನ್‌ಐಎಚ್‌) ಪ್ರಕಟಣೆಯಲ್ಲಿ ತಿಳಿಸಿದೆ.

‘ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಸಂಭಾವ್ಯ ಲಸಿಕೆಯೊಂದು ಕ್ಲಿನಿಕಲ್‌ ಟ್ರಯಲ್‌ನ ಮೂರನೇ ಹಂತಕ್ಕೆ ಪ್ರವೇಶಿಸುತ್ತಿದೆ ಎಂದು ಎನ್‌ಐಎಚ್‌ ತಿಳಿಸಿದೆ. ಕ್ಯಾನ್‌ಸಿನೊಬಯೊ ಈಗಾಗಲೇ ಚೀನಾ, ರಷ್ಯಾ, ಚಿಲಿಯಲ್ಲಿ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ಆರಂಭಿಸಿದೆ. ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಎಜೆಎಂ ಫಾರ್ಮಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದ್ನಾನ್‌ ಹುಸೈನ್‌ ಕಳೆದ ತಿಂಗಳಷ್ಟೇ ಎನ್‌ಐಎಚ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದು ಎನ್‌ಐಎಚ್‌ ನಿರ್ದೇಶಕ ಮೇಜರ್‌ ಜನರಲ್‌ ಅಮೀರ್ ಇಕ್ರಮ್‌ ಉಲ್ಲೇಖಿಸಿದ್ದಾರೆ.

ADVERTISEMENT

ಪ್ರಯೋಗಕ್ಕೆ ಈಗಾಗಲೇ 200ಕ್ಕೂ ಅಧಿಕ ಜನರು ನೋಂದಣಿ ಮಾಡಿಕೊಂಡಿದ್ದು, 56 ದಿನಗಳಲ್ಲಿ ಪ್ರಯೋಗ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.