ADVERTISEMENT

ಗಗನಕ್ಕೇರಿದ ಬೆಲೆ: ಬಡವರ ಆಕ್ರೋಶ

ಪಾಕಿಸ್ತಾನದಲ್ಲಿ ಸರ್ಕಾರದ ವಿರುದ್ಧ ಭುಗಿಲೆದ್ದ ಅಸಮಾಧಾನ

ರಾಯಿಟರ್ಸ್
Published 4 ಏಪ್ರಿಲ್ 2019, 18:53 IST
Last Updated 4 ಏಪ್ರಿಲ್ 2019, 18:53 IST
ಲಾಹೋರ್‌ನಲ್ಲಿ ಆಟೊ ಚಾಲಕರು ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದರು - –ಎಎಫ್‌ಪಿ ಚಿತ್ರ
ಲಾಹೋರ್‌ನಲ್ಲಿ ಆಟೊ ಚಾಲಕರು ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದರು - –ಎಎಫ್‌ಪಿ ಚಿತ್ರ   

ಇಸ್ಲಾಮಾಬಾದ್‌/ ಕರಾಚಿ: ‘ಅಧಿಕಾರಕ್ಕೆ ಬರುವ ಮುನ್ನ ಇಮ್ರಾನ್‌ ಖಾನ್‌ ಬಡತನ ನಿರ್ಮೂಲನೆ ಬಗ್ಗೆ ಅಪಾರ ಆಶ್ವಾಸನೆಯ ಹೇಳಿಕೆ ನೀಡಿದ್ದರು. ಆದರೆ, ಅವರು ಬಡತನ ನಿರ್ಮೂಲನೆ ಮಾಡುತ್ತಿಲ್ಲ. ಬಡವರನ್ನೇ ನಿರ್ಮೂಲನೆ ಮಾಡುತ್ತಿದ್ದಾರೆ...’

–ಇದು 30 ವರ್ಷದ ಟ್ಯಾಕ್ಸಿ ಚಾಲಕ ಸುಲ್ತಾನ್‌ ಅವರ ಆಕ್ರೋಶದ ನುಡಿಗಳು.

ಪೆಟ್ರೋಲ್‌ ಬೆಲೆ ದುಬಾರಿಯಾಗಿರುವುದರಿಂದ ಸುಲ್ತಾನ್‌ ಅವರಂತಹ ಚಾಲಕರು ಆತಂಕಗೊಂಡಿದ್ದಾರೆ. ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗಿದೆ.

ADVERTISEMENT

ಬಡವರಿಗೆ ನೆರವು ನೀಡುವುದಾಗಿ ಕಳೆದ ವರ್ಷ ಇಮ್ರಾನ್‌ಖಾನ್‌ ನೀಡಿದ್ದ ಭರವಸೆ ಹುಸಿಯಾಗಿದೆ ಎನ್ನುವುದು ಜನಸಾಮಾನ್ಯರ ಆಕ್ರೋಶ. ಪಾಕಿಸ್ತಾನದಲ್ಲಿಗಗನಕ್ಕೇರುತ್ತಿರುವ ಬೆಲೆಗಳಿಂದ ಅವರು ಕಂಗಾಲಾಗಿದ್ದಾರೆ.

ಕಳೆದ ಐದು ವರ್ಷಗಳಲ್ಲೇ ಅತಿ ಹೆಚ್ಚಿನ ಹಣದುಬ್ಬರ ದಾಖಲಾಗಿದೆ. ಮಾರ್ಚ್‌ನಲ್ಲಿ ಶೇಕಡ 9.4ರಷ್ಟು ದಾಖಲಾಗಿತ್ತು. ಆಹಾರ ಉತ್ಪನ್ನಗಳು ಮತ್ತು ಇಂಧನದ ಬೆಲೆಗಳು ಅಪಾರ ಪ್ರಮಾಣದಲ್ಲಿ ಹೆಚ್ಚಾಗಿವೆ.

‘ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳನ್ನು ಹೊರತುಪಡಿಸಿದರೆ ಇತರ ವಸ್ತುಗಳನ್ನು ಗ್ರಾಹಕರು ಖರೀದಿಸಲು ಹಿಂದೇಟು ಹಾಕುವುದು ಸಾಮಾನ್ಯ. ಇಂಧನ ಬೆಲೆಗಳನ್ನು ಯಾವ ರೀತಿಯಲ್ಲಿ ಹೊಂದಾಣಿಕೆ ಮಾಡಲಾಗುತ್ತಿದೆ ಎನ್ನುವ ಅಂಶದ ಮೇಲೆ ಅವಲಂಬಿತವಾಗಿದೆ’ ಎಂದು ಆರ್ಥಿಕ ತಜ್ಞ ಸಾದ್‌ ಹಷ್ಮಿ ವಿಶ್ಲೇಷಿಸಿದ್ದಾರೆ.

ಆರ್ಥಿಕ ಸಂಕಷ್ಟದಿಂದ ಪಾರಾಗಲು ಪಾಕಿಸ್ತಾನವು ಚೀನಾದ ನೆರವು ಕೋರಿದೆ. ಸೌದಿ ಅರೇಬಿಯಾ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಸಹ 11 ಬಿಲಿಯನ್‌ ಡಾಲರ್‌(₹75,928 ಕೋಟಿ) ಸಾಲ ನೀಡಿವೆ. ‘ತೈಲ ಬೆಲೆ ಏರಿಕೆ ಮತ್ತು ಕರೆನ್ಸಿ ಮೌಲ್ಯ ಕೆಲವು ಬಾರಿ ಕುಸಿತವಾಗುತ್ತವೆ. ದೇವರ ಇಚ್ಛೆಯಂತೆ ಉತ್ತಮ ದಿನಗಳು ಬರಲಿವೆ’ ಎಂದು ಮಾಹಿತಿ ಸಚಿವ ಫವಾದ್‌ ಚೌಧರಿ ಪ್ರತಿಕ್ರಿಯಿಸಿದ್ದಾರೆ.

**

ಬದಲಾವಣೆಗಾಗಿ ಇಮ್ರಾನ್‌ಗೆ ಮತ ಚಲಾಯಿಸಿದ್ದೆ. ಆದರೆ, ಈಗ ಪಶ್ಚಾತಾಪ ಪಡಬೇಕಾಗಿದೆ.
-ಸಾರಾ ಸಲ್ಮಾನ್‌, ಲಾಹೋರ್ ಯುವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.