ADVERTISEMENT

ಟರ್ಕಿ ಮಧ್ಯಸ್ಥಿಕೆಯಲ್ಲಿ ಪಾಕ್‌–ಅಘ್ಗಾನಿಸ್ತಾನ ಶಾಂತಿ ಮಾತುಕತೆ

ಭಯೋತ್ಪಾದಕ ಚಟುವಟಿಕೆಗಳ ನಿಗ್ರಹದ ಕುರಿತು ಚರ್ಚೆ

ಪಿಟಿಐ
Published 28 ಅಕ್ಟೋಬರ್ 2025, 15:59 IST
Last Updated 28 ಅಕ್ಟೋಬರ್ 2025, 15:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಗಡಿಯುದ್ದಕ್ಕೂ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವುದು, ಶಾಂತಿ ಮರುಸ್ಥಾಪನೆ, ದ್ವಿಪಕ್ಷೀಯ ಸಹಕಾರ ಸೇರಿದಂತೆ ಹಲವು ವಿಷಯಗಳ ಕುರಿತು ಅಘ್ಗಾನಿಸ್ತಾನ ಮತ್ತು ಪಾಕಿಸ್ತಾನ ರಾಷ್ಟ್ರಗಳು ಟರ್ಕಿ ಮಧ್ಯಸ್ಥಿಕೆಯಲ್ಲಿ ನವೆಂಬರ್‌ 1ರಿಂದ ಮೂರು ದಿನ ಮಾತುಕತೆ ನಡೆಸಲಿವೆ. 

ಇಸ್ತಾಂಬುಲ್‌ನಲ್ಲಿ ನಡೆಯಲಿರುವ ಈ ಮಾತುಕತೆಯು ನ.3ರವರೆಗೆ ಮುಂದುವರಿಯಲಿದೆ. ಆದರೆ, ಮಾತುಕತೆಯಲ್ಲಿ ಯಾವುದೇ ‘ಅಂತಿಮ ಒಪ್ಪಂದ’ಕ್ಕೆ ಬರಲಾಗುವುದಿಲ್ಲ ಎಂದು ‘ಡಾನ್‌’ ಪತ್ರಿಕೆಯ ವರದಿ ಮಾಡಿದೆ.

ಸಭೆಯಲ್ಲಿ ಚರ್ಚೆಯಾಗಲಿರುವ ಹೆಚ್ಚಿನ ಅಂಶಗಳನ್ನು ಉಭಯ ದೇಶಗಳು ಈಗಾಗಲೇ ಪರಸ್ಪರ ಒಪ್ಪಿಕೊಂಡಿವೆ. ಮುಖ್ಯವಾಗಿ ಅಘ್ಗಾನಿಸ್ತಾನವನ್ನು ಕೇಂದ್ರವಾಗಿಸಿಕೊಂಡು ಕಾರ್ಯಾಚರಿಸುತ್ತಿರುವ ನಿಷೇಧಿತ ತೆಹ್ರೀಕ್–ಇ–ತಾಲಿಬಾನ್ ಪಾಕಿಸ್ತಾನ್‌ (ಟಿಟಿಪಿ) ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನವು ಈ ಸಭೆಯಲ್ಲಿ ಒತ್ತಾಯಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಸಭೆಯ ಬಳಿಕ ಉಭಯ ದೇಶಗಳು ಜಂಟಿ ಪ್ರಕಟಣೆ ಹೊರಡಿಸಬಹುದು ಎಂದು ಪತ್ರಿಕೆ ವರದಿ ಉಲ್ಲೇಖಿಸಿ ಅಧಿಕಾರಿಗಳು ಹೇಳಿದ್ದಾರೆ. 

ADVERTISEMENT

‘ಅಫ್ಗಾನಿಸ್ತಾನದ ಜತೆಗೆ ಇಸ್ತಾಂಬುಲ್‌ನಲ್ಲಿ ನಡೆಯಲಿರುವ ಮಾತುಕತೆಯು ವಿಫಲಗೊಂಡರೆ, ಮುಂದಿನ ಹಂತದಲ್ಲಿ ಸಂಪೂರ್ಣ ಯುದ್ಧ ಆರಂಭಿಸುವುದಾಗಿ’ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಶನಿವಾರ ಎಚ್ಚರಿಕೆ ನೀಡಿದ್ದರು.

ಕತಾರ್‌ ಮತ್ತು ಟರ್ಕಿ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆ ಬಳಿಕ, ಅ.19ರಂದು ಪಾಕಿಸ್ತಾನ ಮತ್ತು ಅಘ್ಗಾನಿಸ್ತಾನ ಕದನ ವಿರಾಮ ಘೋಷಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.