ADVERTISEMENT

ಗಡಿ ಸಂಘರ್ಷ ತಾರಕಕ್ಕೆ| 274 ತಾಲಿಬಾನಿಗಳ ಹತ್ಯೆ: ಪಾಕಿಸ್ತಾನ

ಪ್ರತಿದಾಳಿಯಲ್ಲಿ ಪಾಕಿಸ್ತಾನದ 55 ಸೈನಿಕರು ಹತ: ಅಫ್ಗಾನ್

ಪಿಟಿಐ
Published 27 ಫೆಬ್ರುವರಿ 2026, 15:35 IST
Last Updated 27 ಫೆಬ್ರುವರಿ 2026, 15:35 IST
<div class="paragraphs"><p>ಅಫ್ಗಾನಿಸ್ತಾನದ ಕಂದಹಾರ್‌ನಲ್ಲಿ ಯೋಧ ಗಸ್ತು ಕಾಯುತ್ತಿರುವುದು ಶುಕ್ರವಾರ ಕಂಡುಬಂತು</p></div>

ಅಫ್ಗಾನಿಸ್ತಾನದ ಕಂದಹಾರ್‌ನಲ್ಲಿ ಯೋಧ ಗಸ್ತು ಕಾಯುತ್ತಿರುವುದು ಶುಕ್ರವಾರ ಕಂಡುಬಂತು

   

ಇಸ್ಲಾಮಾಬಾದ್‌/ಕಾಬೂಲ್: ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನ ನಡುವೆ ಸಂಘರ್ಷ ತೀವ್ರಗೊಂಡಿದೆ. ಇದರ ಬೆನ್ನಲ್ಲೇ, ಅಪ್ಗಾನಿಸ್ತಾನದ ರಾಜಧಾನಿ ಕಾಬೂಲ್‌ ಸೇರಿದಂತೆ ಪ್ರಮುಖ ನಗರಗಳ ಮೇಲೆ ಪಾಕಿಸ್ತಾನವು ಬಾಂಬ್‌ ದಾಳಿ ನಡೆಸಿದೆ.

‘ಕಳೆದೊಂದು ತಿಂಗಳಿನಿಂದ ಎರಡು ರಾಷ್ಟ್ರಗಳ ನಡುವೆ ದಾಳಿ– ಪ್ರತಿದಾಳಿ ನಡೆಯುತ್ತಿದ್ದು, ಅಫ್ಗಾನಿಸ್ತಾನದ ವಿರುದ್ಧ ಯುದ್ಧ ಆರಂಭಿಸಲಾಗಿದೆ’ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಅಸೀಫ್ ಘೋಷಣೆ ಮಾಡಿದ್ದಾರೆ.

ADVERTISEMENT

2021ರಲ್ಲಿ ತಾಲಿಬಾನಿಗಳು ಅಫ್ಗಾನಿಸ್ತಾನದಲ್ಲಿ ಅಧಿಕಾರ ಹಿಡಿದ ಬಳಿಕ ಇದೇ ಮೊದಲ ಬಾರಿಗೆ ವಾಯುದಾಳಿಗೆ ಸಾಕ್ಷಿಯಾಗಿದೆ. ಕಾಬೂಲ್‌ ಹಾಗೂ ಕಂದಹಾರ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿವೆ. 

274 ಮಂದಿ ಬಲಿ: ಪಾಕಿಸ್ತಾನದ ಗಡಿ ಸೇನಾ ನೆಲೆಗಳನ್ನು ಗುರಿಯಾಗಿರಿಸಿ ಅಫ್ಗಾನ್‌ ಸೇನೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ನಡೆಸಿದ ಪ್ರತಿದಾಳಿಯಲ್ಲಿ ಅಫ್ಗಾನ್‌ನ 2740 ಮಂದಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ.

‘ಆಪರೇಷನ್‌ ಗಝಾಬ್‌ ಲಿಲ್‌ ಹಕ್‌’ ಹೆಸರಿನಲ್ಲಿ ಗುರುವಾರ ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಿ, ದಾಳಿ ಮುಂದುವರಿದಿದೆ. ತಾಲಿಬಾನಿಗಳಿಗೆ ಸೇನಾ ಪಡೆಯು ತಕ್ಕ ಪ್ರತ್ಯುತ್ತರ ನೀಡುತ್ತಿದೆ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್‌ ತಿಳಿಸಿದ್ದಾರೆ. 

‘ಸೇನೆಯು ನಡೆಸಿದ ದಾಳಿಯಲ್ಲಿ 274 ಅಫ್ಗಾನ್‌ ತಾಲಿಬಾನಿಗಳು ಮೃತಪಟ್ಟಿದ್ದು, 200 ಮಂದಿ ಗಾಯಗೊಂಡಿದ್ದಾರೆ’ ಎಂದು ಪಾಕಿಸ್ತಾನದ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಅತಾಹ್‌ ಉಲ್ಲಾ ತರಾರ್‌ ತಿಳಿಸಿದ್ದಾರೆ. 

ದಾಳಿಯಲ್ಲಿ ಪಾಕಿಸ್ತಾನದ 12 ಸೈನಿಕರು ಮೃತಪಟ್ಟಿರುವುದನ್ನು ಅವರು ಖಚಿತಪಡಿಸಿದ್ದಾರೆ.

‘ಕಾಬೂಲ್‌, ಪಕ್ತಿಯಾ ಹಾಗೂ ಕಂದಹಾರ್‌ಗಳ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆಯಿದೆ. 27 ನೆಲೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ. 9 ಕೇಂದ್ರಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. 

‘ಸೇನಾ ತುಕಡಿಗಳ ಎರಡು ಕೇಂದ್ರ ಕಚೇರಿ, ಮೂರು ಬ್ರಿಗೇಡ್‌ ಕೇಂದ್ರ ಕಚೇರಿ, ಎರಡು ಶಸ್ತ್ರಾಸ್ತ್ರ ಸಂಗ್ರಹಾಲಯ, ಒಂದು ಲಾಜಿಸ್ಟಿಕ್‌ ಕೇಂದ್ರ, ಮೂರು ಬೆಟಾಲಿಯನ್‌ ಕೇಂದ್ರ ಕಚೇರಿ, ಎರಡು ಸೆಕ್ಟರ್‌ ಕೇಂದ್ರ ಕಚೇರಿ ಹಾಗೂ 80 ಟ್ಯಾಂಕ್‌ಗಳನ್ನು ನಾಶಪಡಿಸಲಾಗಿದೆ’ ಎಂದು ವಿವರಿಸಿದ್ದಾರೆ. 

ಅಫ್ಗಾನ್‌ ತಾಲಿಬಾನ್‌ಗೆ ಸೇರಿದ ಪ್ರಮುಖ ಸೇನಾ ನೆಲೆಗಳಾದ ಕಾಬೂಲ್‌, ಕಂದಹಾರ್‌ ಹಾಗೂ ಪಕ್ತಿಯಾದ ಮೇಲೆ ಪಾಕಿಸ್ತಾನವು ವಾಯುದಾಳಿ ನಡೆಸಿದೆ ಎಂದು ಪಾಕಿಸ್ತಾನಿ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ‘ಪಿಟಿವಿ ನ್ಯೂಸ್‌’ ವರದಿ ಮಾಡಿದೆ.

’55 ಪಾಕ್‌ ಸೈನಿಕರ ಹತ್ಯೆ’: ಡುರಾಂಡ್‌ ಲೈನ್‌ ಉದ್ದಕ್ಕೂ ಕೈಗೊಂಡ ಪ್ರತಿದಾಳಿಗಳಲ್ಲಿ ಪಾಕಿಸ್ತಾನ ಸೇನೆಯ 55 ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಅಫ್ಗಾನಿಸ್ತಾನದ ರಕ್ಷಣಾ ಸಚಿವಾಲಯ ತಿಳಿಸಿದೆ.

‘ಪಾಕಿಸ್ತಾನದ ಎರಡು ಸೇನಾ ಕೇಂದ್ರ ಕಚೇರಿಗಳು ಹಾಗೂ 19 ಚೆಕ್‌ಪೋಸ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದೂ ಸಚಿವಾಲಯ ತಿಳಿಸಿದೆ.

ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನದ ನಡೆಸಿದ ಸೇನಾ ದಾಳಿಯನ್ನು ಬೆಂಬಲಿಸಿ ಜನರು ಲಾಹೋರ್‌ನಲ್ಲಿ ಶುಕ್ರವಾರ ರ‍್ಯಾಲಿ ನಡೆಸಿದರು–ಎಎಫ್‌ಪಿ ಚಿತ್ರ
ಪಾಕ್‌ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಖೊಸ್ಟ್‌ ಪ್ರಾಂತ್ಯದಲ್ಲಿ ಸೇನಾ ಟ್ಯಾಂಕ್‌ಗಳನ್ನು ಸಿದ್ಧಗೊಳಿಸಿದ್ದ ಅಫ್ಗಾನ್‌ ಪಡೆಗಳು–ಎಎಫ್‌ಪಿ ಚಿತ್ರ 
ಪಾಕಿಸ್ತಾನದ ಜನರು ಹಾಗೂ ಸೇನಾ ಪಡೆಗಳು ದೇಶದ ಸುರಕ್ಷತೆ ಸಾರ್ವಭೌಮತೆ ಹಾಗೂ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಬದ್ಧವಾಗಿವೆ
ಶೆಹಬಾಜ್‌ ಷರೀಫ್‌ ಪಾಕಿಸ್ತಾನದ ಪ್ರಧಾನಿ

ಸಂಯಮ ಕಾಪಾಡಿಕೊಳ್ಳಿ; ರಷ್ಯಾ ಚೀನಾ ಸಲಹೆ

ಬೀಜಿಂಗ್‌/ಮಾಸ್ಕೊ: ಉಭಯ ದೇಶಗಳು ಸಂಯಮ ಕಾಪಾಡಿಕೊಳ್ಳಬೇಕು. ಮಾತುಕತೆ ಮೂಲಕ ಸಂಘರ್ಷ ಶಮನಕ್ಕೆ ಯತ್ನಿಸಬೇಕು ಎಂದು ರಷ್ಯಾ ಹಾಗೂ ಚೀನಾ ಸಲಹೆ ನೀಡಿವೆ. ‘ಎರಡು ರಾಷ್ಟ್ರಗಳ ನಡುವಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದೇವೆ’ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೊ ನಿಂಗ್‌ ತಿಳಿಸಿದ್ದಾರೆ. ‘ಪಾಕಿಸ್ತಾನ ಹಾಗೂ ಅಪ್ಗಾನಿಸ್ತಾನವು ನಿಕಟ ನೆರೆಹೊರೆಯವರು. ಚೀನಾಕ್ಕೂ ನೆರೆಹೊರೆಯವರಾಗಿದ್ದು ಹಾಗೂ ಸ್ನೇಹಿತರೇ ಆಗಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಸಂಘರ್ಷ ಹಾಗೂ ಸಾವು–ನೋವಿನ ಕುರಿತಂತೆ ಚೀನಾವು ತೀವ್ರ ಕಳವಳ ಹೊಂದಿದೆ’ ಎಂದು ಹೇಳಿದ್ದಾರೆ. ‘ಎಲ್ಲಾ ಮಾದರಿಯ ಭಯೋತ್ಪಾದನೆ ನಿಗ್ರಹವನ್ನು ಚೀನಾ ಬೆಂಬಲಿಸುತ್ತದೆ. ಎರಡು ರಾಷ್ಟ್ರಗಳು ಮಾತುಕತೆಯ ಮೂಲಕ ಆದಷ್ಟು ಬೇಗ ಕದನ ವಿರಾಮ ಘೋಷಿಸುವ ಮೂಲಕ ಪ್ರಾಣ ಹಾನಿ ತಪ್ಪಿಸಬೇಕು’ ಎಂದು ಈ ವೇಳೆ ಕರೆ ನೀಡಿದ್ದಾರೆ.  ಯುದ್ಧ ನಿಲ್ಲಿಸಿ ಮಾತುಕತೆ ನಡೆಸಿ: ‘ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನವು ಸಂಘರ್ಷವನ್ನು ಕೊನೆಗೊಳಿಸಿ ರಾಜತಾಂತ್ರಿಕ ಮಾರ್ಗದ ಮೂಲಕ ಭಿನ್ನಮತವನ್ನು ಬಗೆಹರಿಸಿಕೊಳ್ಳಬೇಕು’ ಎಂದು ರಷ್ಯಾ ಒತ್ತಾಯಿಸಿದೆ. ‘ಎರಡು ಕಡೆಗಳಲ್ಲಿ ನಾಗರಿಕರು ಸೇರಿದಂತೆ ಹಲವಾರು ಸಾವು–ನೋವು ಅನುಭವಿಸಿದ್ದಾರೆ. ನಮ್ಮ ಮಿತ್ರ ರಾಷ್ಟ್ರಗಳಾದ ‍ಪಾಕಿಸ್ತಾನ ಹಾಗೂ ಅಫ್ಗಾನ್‌ ಅಪಾಯಕಾರಿ ಸಂಘರ್ಷ ಕೊನೆಗೊಳಿಸಿ ರಾಜತಾಂತ್ರಿಕ ಮಾರ್ಗದ ಮೂಲಕ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತೇವೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಮರಿಯಾ ಝಕ್ರಾರೊವಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತದ ವಿರುದ್ಧ ಆರೋಪ

‘ತಾಲಿಬಾನಿಗಳು ಅಫ್ಗಾನಿಸ್ತಾನವನ್ನು ಭಾರತದ ಕಾಲೊನಿಯಾಗಿ ಮಾಡಿದ್ದಾರೆ. ಇಡೀ ವಿಶ್ವದ ಭಯೋತ್ಪಾದಕರನ್ನು ತನ್ನ ದೇಶದಲ್ಲಿ ಒಟ್ಟುಗೂಡಿಸಿ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದ್ದಾರೆ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್‌ ‘ಎಕ್ಸ್‌’ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.