ಇಸ್ಲಾಮಾಬಾದ್: ಅಫ್ಗನ್ ತಾಲಿಬಾನ್ ನಡೆಸಿದ ಹಲವಾರು ದಾಳಿಗಳನ್ನು ತಾನು ಹಿಮ್ಮೆಟ್ಟಿಸಿರುವುದಾಗಿ ಪಾಕಿಸ್ತಾನ ಸೇನೆ ಬುಧವಾರ ಹೇಳಿದೆ. ಅಲ್ಲದೆ, ಉಭಯ ದೇಶಗಳ ನಡುವಿನ ಗಡಿ ಘರ್ಷಣೆಯ ಪ್ರತ್ಯೇಕ ಘಟನೆಗಳಲ್ಲಿ ತಾನು 40ಕ್ಕೂ ಹೆಚ್ಚು ದಾಳಿಕೋರರನ್ನು ಕೊಂದಿರುವುದಾಗಿ ತಿಳಿಸಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಲೂಚಿಸ್ತಾನ ಪ್ರಾಂತ್ಯದ ಸ್ಪಿನ್ ಬೋಲ್ಡಕ್ ಪ್ರದೇಶದ ನಾಲ್ಕು ಸ್ಥಳಗಳ ಮೇಲೆ ಅಫ್ಗನ್ ತಾಲಿಬಾನ್ ದಾಳಿ ನಡಿಸಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಗಿದೆ. ಈ ವೇಳೆ 15–20 ಅಫ್ಗನ್ ತಾಲಿಬಾನಿಗಳು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಸೇನೆ ಹೇಳಿದೆ.
ಫಿತ್ನಾ ಅಲ್ ಖವಾರಿಜ್ ಮತ್ತು ಅಫ್ಗನ್ ತಾಲಿಬಾನ್ ನೆಲೆಗಳಲ್ಲಿ ದಾಳಿಗಳ ಮತ್ತಷ್ಟು ಬೆಳವಣಿಗೆ ವರದಿಯಾಗಿದೆ ಎಂದು ಸೇನೆ ಹೇಳಿದೆ. ಪಾಕಿಸ್ತಾನಿ ಅಧಿಕಾರಿಗಳು ಫಿತ್ನಾ ಅಲ್ ಖವಾರಿಜ್ ಎಂಬ ಪದವನ್ನು ನಿಷೇಧಿತ ತೆಹ್ರೀಕ್–ಇ–ತಾಲಿಬಾನ್ ಪಾಕಿಸ್ತಾನ್‌ನ (ಟಿಟಿಪಿ) ಉಗ್ರಗಾಮಿಗಳನ್ನು ಉಲ್ಲೇಖಿಸಲು ಬಳಸುತ್ತಾರೆ.
ಪಾಕಿಸ್ತಾನಿ ಅಧಿಕಾರಿಗಳಿಂದ ಅಫ್ಗನ್ ನಿರಾಶ್ರಿತರ ಶಿಬಿರ ಧ್ವಂಸ
ಕರಾಚಿ (ಪಿಟಿಐ): ಪಾಕಿಸ್ತಾನದ ಕರಾಚಿಯ ಹೊರವಲಯದಲ್ಲಿರುವ ನಿರಾಶ್ರಿತರ ಶಿಬಿರವಾದ ಅಫ್ಗನ್ ಬಸ್ತಿಯಲ್ಲಿ (ಗ್ರಾಮ) ಪಾಕಿಸ್ತಾನಿ ಅಧಿಕಾರಿಗಳು ಧ್ವಂಸ ಮತ್ತು ಸ್ವಚ್ಛತಾ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನು ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರೊಂದಿಗೆ ಘರ್ಷಣೆ ನಡೆದಿದ್ದು, ಕೆಲವು ಜನರು ಗಾಯಗೊಂಡಿದ್ದಾರೆ.
ಶಿಬಿರದಲ್ಲಿ ವಾಸಿಸುತ್ತಿದ್ದ ಸುಮಾರು 8000 ಅಫ್ಗನ್ನರು ತಮ್ಮ ದೇಶಕ್ಕೆ ಮರಳಿದ್ದರಿಂದ ಅಲ್ಲಿನ ಮನೆ ಮತ್ತು ಅಂಗಡಿಗಳು ಸೇರಿದಂತೆ ಕಾಂಕ್ರೀಟ್ ಕಟ್ಟಡಗಳು ಹಾಗೆಯೇ ಇತ್ತು. ಅದನ್ನು ಈಗ ಭೂಗಳ್ಳರು ಒತ್ತುವರಿ ಮಾಡಿಕೊಂಡಿದ್ದು, ಅದಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಕಾನೂನು ಪ್ರಕಾರ ವಾಸಿಸುತ್ತಿದ್ದ ಅಫ್ಗನ್ನರನ್ನು ಗುರಿಯಾಗಿಸಲಾಗುತ್ತಿದೆ ಎಂಬ ವದಂತಿಗಳಿಂದಾಗಿ ಧ್ವಂಸ ಕಾರ್ಯಾಚರಣೆಯ ವೇಳೆ ಕೇವಲ ಸಣ್ಣಪುಟ್ಟ ಘರ್ಷಣೆಗಳು ನಡೆದವು. ಆದರೆ ನಾವು ಅವರಿಗೆ ವಿವರಿಸಿದ ನಂತರ ಶಾಂತತೆ ಮರಳಿತು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.